ಸ್ಪೋರ್ಟ್ಸ್ ಮೇಲ್ ವರದಿ
ಕರ್ನಾಟಕದ ಅರ್ಚನಾ ಕಾಮತ್ ಯೂತ್ ಒಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಕ್ವಾರ್ಟರ್ನ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರ್ಜೆಂಟೀನಾದ ಬ್ಯೂನಸ್‌ಐರಿಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಂಕಾಂಗ್‌ನ ಲೀ ಕಾ ಯೀ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸುವ ಮೂಲಕ ಅರ್ಚನಾ ಈ ಐತಿಹಾಸಿಕ ಸಾಧನೆ ಮಾಡಿದರು. ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಅರ್ಚನಾ 14-12, 14-12, 9-11, 12=10, 15-13 ಅಂತರದಲ್ಲಿ ಜಯ ಗಳಿಸಿದರು. ಚೆಕ್‌ಗಣರಾಜ್ಯದಲ್ಲಿ ನಡೆದ ಯೂತ್ ಒಲಿಂಪಿಕ್ಸ್ ಅರ್ಹಾತಾ ಸುತ್ತಿನಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ ಅರ್ಚನಾ ಯಶಸ್ವಿಯಾದರು. ಕೂಕ್ಸ್ ಐಸ್ಲೆಂಡ್ಸ್‌ನ ರರೋನ್‌ಟೊಂಗಾದಲ್ಲಿ ನಡೆದ ಎರಡನೇ ಸುತ್ತಿನ ಅರ್ಹತಾ ಸುತ್ತಿನಲ್ಲಿ ಜಯ ಗಳಿಸಿದ ಅರ್ಚನಾ ಬ್ಯೂನಸ್‌ಐರಿಸ್‌ಗೆ ತೇರ್ಗಡೆಯಾಗಿದ್ದರು.
ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 18 ವರ್ಷದ ಅರ್ಚನಾ, ಎರಡನೇ ಮ್ಯಾಚ್‌ಪಾಯಿಂಟ್‌ನಲ್ಲಿ ಯಶಸ್ಸು ಕಾಣುವ ಮೂಲಕ ಆರಂಭದಲ್ಲೇ ಮುನ್ನಡೆ ಕಂಡುಕೊಂಡರು. ಕ್ವಾರ್ಟರ್ನ ಫೈಲ್‌ನಲ್ಲಿ ಅರ್ಚನಾ ಅಜರ್‌ಬೈಜಾನ್‌ನ ಜಿಂಗ್‌ನಿಂಗ್ ವಿರುದ್ಧ ಸೆಣಸಲಿದ್ದಾರೆ.
ಅರ್ಚನಾ ಅವರ ಐತಿಹಾಸಿಕ ಸಾಧನೆಗೆ ಟೇಬಲ್‌ಟೆನಿಸ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ಎಂ.ಪಿ.ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.