ಹೈದರಾಬಾದ್: ಇಲ್ಲಿನ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 44-29 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಮಾಡಿದೆ. Tamil Thalaivas put on a show begin PKL season 11 with big win against Telugu Titans.
ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ತೆಲುಗು ಟೈಟಾನ್ಸ್‌ನ ಪವನ್ ಶೆರಾವತ್ ಸೂಪರ್ ರೈಡ್ ಮೂಲಕ ಅದ್ಭುತ ಆರಂಭ ನೀಡಿದರು. ತೆಲುಗು ಟೈಟಾನ್ಸ್ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಜಯ ಗಳಿಸಿತ್ತು. ನಂತರದ ರೈಡ್‌ನಲ್ಲಿ ತೆಲುಗು ಟೈಟಾನ್ಸ್ ನಾಯಕ ಮತ್ತೆ ಮೂರು ಅಂಕಗಳನ್ನು ಗಳಿಸಿ ತಂಡಕ್ಕೆ ಉತ್ತಮ ಮುನ್ನಡೆ ಕಲ್ಪಿಸಿದ್ದರು. ಆದರೆ ತಮಿಳು ತಲೈವಾಸ್‌ನ ಸಚಿನ್ ಉತ್ತಮ ರೈಡಿಂಗ್ ಪ್ರದರ್ಶಿಸುವುದರೊಂದಿಗೆ ತೆಲುಗು ಟೈಟಾನ್ಸ್ ಆಲೌಟ್ ಆಯಿತು. ತಮಿಳು ತಲೈವಾಸ್ ಮುನ್ನಡೆಯನ್ನೂ ಕಂಡುಕೊಂಡಿತು. ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್ 20-17 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಸಾಗರ್ ರಾಠೆ ತಂಡವನ್ನು ಆಲೌಟ್ ಮಾಡುವ ಮೂಲಕ ತಮಿಳು ತಲೈವಾಸ್ ಮತ್ತೆ ಮುನ್ನಡೆ ಕಂಡಿತು. ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ತಲೈವಾಸ್ 31-22 ಅಂತರದಲ್ಲಿ ಮೇಲುಗೈ ಸಾಧಿಸಿತ್ತು. ನರೇಂದರ್ ಕಂಡೋಲ ಹಾಗೂ ಸಚಿನ್ ಎದುರಾಳಿ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ನರೇಂದರ್ ಕಂಡೋಲ ಮತ್ತು ಸಚಿನ್ ಸೂಪರ್ 10 ಸಾಧನೆ ಮಾಡಿ ತಮಿಳು ತಲೈವಾಸ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತೆಲುಗು ಟೈಟಾನ್ಸ್ ಪರ ನಾಯಕ ಪವನ್ ಶೆರಾವತ್ 10 ಅಂಕ ಗಳಿಸಿದರೂ ಜಯ ದಕ್ಕಲಿಲ್ಲ. ಸತತ ಎರಡನೇ ಪಂದ್ಯದಲ್ಲಿ ಶೆರಾವತ್ ಸೂಪರ್ 10 ಸಾಧನೆ ಮಾಡಿದ್ದಾರೆ.