ದೆಹಲಿ:
ಭಾರತದ ಅನುಭವಿ ಟೆನಿಸ್ ತಾರೆ ಪ್ರಜ್ಞೇಶ್ ಗುಣೇಶ್ವರನ್ ಅವರು ( ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಷಿನಲ್ಸ್ ) ಎಟಿಪಿ ರ್ಯಂಕಿಂಗ್ ನಲ್ಲಿ 34 ಸ್ಥಾನಗಳ ಏರಿಕೆ ಕಾಣುವ ಮೂಲಕ 110 ಸ್ಥಾನಕ್ಕೇರಿದ್ದಾರೆ.
ಕಳೆದ ವಾರ ಮುಕ್ತಾಯಗೊಂಡ ಬೆಂಗಳೂರು ಓಪನ್ ಎಟಪಿ ಚಾಲೆಂಜರ್ ಟೂರ್ನಿಯ ಫೈನಲ್‌ನಲ್ಲಿ ಸಾಕೇತ್ ಮೈನೆನಿ ಅವರನ್ನು ಪರಾಭವಗೊಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅಲ್ಲದೇ ಕಳೆದ ತಿಂಗಳು ನಡೆದ ನಿಂಗ್ಬೊ ಚಾಲೆಂಜರ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. ಈ ಮೂಲಕ 523 ಅಂಕಗಳೊಂದಿಗೆ 34 ಸ್ಥಾನಗಳ ಜಿಗಿತ ಕಾಣುವಲ್ಲಿ ಯಶಸ್ವಿಯಾದರು.
ಪ್ರಸಕ್ತ ಸಾಲಿನ ಆರಂಭದಲ್ಲಿ ಗುಣೇಶ್ವರನ್ 243ನೇ ಸ್ಥಾನದಲ್ಲಿದ್ದರು. ಈ ವರ್ಷದಲ್ಲಿ ನಡೆದ ಟೂರ್ನಿಗಳಲ್ಲಿ ಅತ್ಯುತ್ತಮ ಆಟವಾಡಿ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ಈ ವಾರ ನಡೆಯುತ್ತಿರುವ ಪುಣೆ ಚಾಲೆಂಜರ್ ಟೂರ್ನಿಯಲ್ಲಿ ಯಶಸ್ವಿ ಹೋರಾಟ ನಡೆಸುವಲ್ಲಿ ಸಫಲರಾದರೆ, ಅಗ್ರ 100ರಲ್ಲಿ ಸ್ಥಾನ ಪಡೆಯಲಿದ್ದಾರೆ. ಭಾರತದ ಮತ್ತೊಬ್ಬ ಆನುಭವಿ ಆಟಗಾರ ಯೂಕಿ ಭಾಂಬ್ರಿ ಕಳೆದ ತಿಂಗಳು ನಡೆದ ಯುರೋಪಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರನಡೆದ ಕಾರಣ ರ್ಯಾಕಿಂಗ್ ನಲ್ಲಿ 21 ಸ್ಥಾನಗಳ ಇಳಿಕೆಯಾಗಿ 128ನೇ ಸ್ಥಾನದಲ್ಲಿದ್ದಾರೆ.