Friday, October 25, 2024

ದೇಶದ ಶ್ರೇಷ್ಠ ಆಟಗಾರರೊಂದಿಗೆ ಆಡುತ್ತಿರುವುದೇ ಹೆಮ್ಮೆ: ವಿನೀತ್‌

ಬೆಂಗಳೂರು:‌ ಇಂಡಿಯನ್‌ ಸೂಪರ್‌ ಲೀಗ್‌ (ISL) Indian Super League ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಋತುವಿನ ಶುಭಾರಂಭ ಕಂಡಿತು. ಈ ಪಂದ್ಯದಲ್ಲಿ ಗೋಲು ಗಳಿಸಿದ ಯುವ ಆಟಗಾರ ವಿನೀತ್‌ ವೆಂಕಟೇಶ್‌. ಬಿಎಫ್‌ಸಿ ಫುಟ್ಬಾಲ್‌ ಅಕಾಡೆಮಿಯಲ್ಲೇ ಬೆಳೆದು, ಅದೇ ಕ್ಲಬ್‌ನಲ್ಲಿ ಹಿರಿಯರು ಆಡುವಾಗ ಬಾಲ್‌ ಬಾಯ್‌ ಆಗಿ ಕಾರ್ಯನಿರ್ವಹಿಸಿದ್ದ ವಿನೀತ್‌, ನಂತರ ಡುರಾಂಡ್‌ ಫುಟ್ಬಾಲ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಈ ಸಾಧನೆ ಇಂಡಿಯನ್‌ ಸೂಪರ್‌ ಲೀಗ್‌ಗೆ ಕರೆದು ತರುತ್ತದೆ. ಭಾರತದ ಶ್ರೇಷ್ಠ ಆಟಗಾರ ಸುನಿಲ್‌ ಛೆಟ್ರಿ ಅವರ ಸಮ್ಮುಖದಲ್ಲೇ ಗೋಲು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಕನ್ನಡಿಗ 19 ರ ಹರೆಯದ ವಿನೀತ್‌ ವೆಂಕಟೇಶ್‌ Vinith Venkatesh ಅವರೊಂದಿಗೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ. Then Ball Boy Now one of the Star player of Bengaluru FC Interview with Vinith Venkatesh.

ಹಿರಿಯ ಆಟಗಾರರ ಸಮ್ಮುಖದಲ್ಲಿ ಗೋಲು ಗಳಿಸಿದ್ದು ಖುಷಿ ಕೊಟ್ಟಿದೆ: ವಿನೀತ್‌ ಗೋಲು ಗಳಿಸಿದ್ದು ಬಲಿಷ್ಠ ಈಸ್ಟ್‌ ಬೆಂಗಾಲ್‌ ತಂಡದ ವಿರುದ್ಧ. ಮೊದಲ ಪಂದ್ಯದಲ್ಲಿ ಇತರ ಹಿರಿಯ ಆಟಗಾರರು ಗೋಲು ಗಳಿಸುವಲ್ಲಿ ವಿಫಲರಾದರು. ವಿನೀತ್‌ ಗೋಲು ಅವಿಸ್ಮರಣೀಯ ಗೋಲಾಯಿತು, “ತಂಡದ ಹಿರಿಯ ಆಟಗಾರರ ಸಮ್ಮುಖದಲ್ಲಿ ಗೋಲು ಗಳಿಸಿರುವುದು ಖುಷಿ ಕೊಟ್ಟಿದೆ. ಇದಕ್ಕಾಗಿ ಕಠಿಣ ಅಭ್ಯಾಸ ಮಾಡಿರುವೆ. ಇದೊಂದು ವಿಶೇಷ ಅನುಭವ, ಮನೆಯಂಗಣದಲ್ಲಿ ಗೋಲು ಗಳಿಸುವ ಬಗ್ಗೆ ಕನಸು ಕಂಡಿರುವೆ. ಅದು ಸಾಧ್ಯವಾಗಿದೆ. ಈ ಗೋಲು ಗಳಿಸಿರುವುದನ್ನು ನನ್ನ ಹೆತ್ತವರು ಸ್ಟ್ಯಾಂಡ್‌ನಲ್ಲಿ ಕುಳಿತು ನೋಡಿದ್ದಾರೆ. ಅದು ಮತ್ತೊಂದು ವಿಶೇಷ.

ಬಾಲ್‌ ಬಾಯ್‌ ಆಗಿದ್ದವ ಪ್ರಮುಖ ತಂಡದಲ್ಲಿ ಆಡುತ್ತಿರುವುದು ಹೆಮ್ಮೆಯ ಸಂಗತಿ: 2017ರಲ್ಲಿ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈಯನ್‌ ಎಫ್‌ಸಿ ವಿರುದ್ಧ ಫೈನಲ್‌ ಆಡುವಾಗ ವಿನೀತ್‌ ಬಾಲ್‌ ಬಾಯ್‌ ಆಗಿ ಕಾರ್ಯನಿರ್ವಹಿಸಿದ್ದರು. ಈ ವರ್ಷ ಅದೇ ಅಂಗಣದಲ್ಲಿ ತಮ್ಮ ತಂಡದ ಪರ ಗೋಲು ಗಳಿಸಿದರು. “ಅದೊಂದು ಮರೆಯಲಾಗದ ಕ್ಷಣ. ದೇಶದ ಶ್ರೇಷ್ಠ ಆಟಗಾರರ ಜೊತೆಯಲ್ಲಿ ಆಡುವುದೇ ಹೆಮ್ಮೆ. ಇನ್ನು ಗೋಲು ಗಳಿಸಿರುವುದು ಅವಿಸ್ಮರಣೀಯ.

ಫುಟ್ಬಾಲ್‌ ಆಟ ಶಿಕ್ಷಣಕ್ಕೆ ಅಡ್ಡಿ ಮಾಡಲಿಲ್ಲ: ಬೆಂಗಳೂರಿನ ವೆಂಕಟೇಶ್‌ ಹಾಗೂ ಸೆಲ್ವಿ ದಂಪತಿಯ ಏಕೈಕ ಪುತ್ರರಾಗಿರುವ ವಿನೀತ್‌, ಫುಟ್ಬಾಲ್‌ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾದವರಲ್ಲ. ಹೆಚ್ಚಿನ ಕ್ರೀಡಾಪಟುಗಳು ವೃತ್ತಿಪರ ಆಟಗಾರರಾಗು ಹಾದಿಯಲ್ಲಿ ಶಿಕ್ಷಣದಿಂದ ದೂರವಾಗುತ್ತಾರೆ. “ಫುಟ್ಬಾಲ್‌ ಜೊತೆಯಲ್ಲೇ ಶಿಕ್ಷಣವನ್ನು ಮುಂದುವರಿಸುತ್ತಿರುವೆ. ಇಂಡಿಯನ್‌ ಓಪನ್‌ ಸ್ಕೂಲ್‌ನಲ್ಲಿ ಅಭ್ಯಾಸ ಮಾಡುತ್ತಿರುವೆ.

ಆತ್ಮವಿಶ್ವಾಸ ಮೂಡಿಸಿದ ಡುರಾಂಡ್‌ ಕಪ್‌: ವಿನೀತ್‌ ಅವರು ಇಂದು ಬಿಎಫ್‌ಸಿಯಲ್ಲಿ ಸ್ಥಾನ ಪಡೆಯಲು ಮುಖ್ಯ ಕಾರಣ ದೇಶದ ಪ್ರತಿಷ್ಠಿತ ಟೂರ್ನಿ ಡುರಾಂಡ್‌ ಕಪ್‌ ಫುಟ್ಬಾಲ್‌. ಅಲ್ಲಿ ಉತ್ತಮ ಪ್ರದರ್ಶನ ತೋರಿರುವುದನ್ನು ಬಿಎಫ್‌ಸಿಯ ಕೋಚ್‌ ಗಮನಿಸಿ ಅವರಿಗೆ ಸೂಪರ್‌ ಲೀಗ್‌ನಲ್ಲಿ ಆಡುವ ಅವಕಾಶವನ್ನು ಕಲ್ಪಿಸಿದರು. “ಭಾರತೀಯ ನೌಕಾ ಪಡೆಯ ತಂಡದ ವಿರುದ್ಧ ಹಿರಿಯ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಮೊದಲ ಪಂದ್ಯದಲ್ಲಿ ಕೊನೆಯ 20 ನಿಮಿಷ ಆಡುವ ಅವಕಾಶ ಸಿಕ್ಕಿತು. ಎರಡನೇ ಪಂದ್ಯದಲ್ಲಿ ಮೊಹಮ್ಮದನ್‌ ಸ್ಪೋರ್ಟಿಂಗ್‌ ವಿರುದ್ಧ ಆಡುವ 11 ಮಂದಿಯಲ್ಲಿ ಸ್ಥಾನ ಪಡೆದೆ. ಅಲ್ಲಿ ಗೋಲು ಗಳಿಸಿದೆ. ಅದು ಹಿರಿಯರ ತಂಡದಲ್ಲಿ ದಾಖಲಿಸಿದ ಮೊದಲ ಗೋಲು. ಸೆಮಿಫೈನಲ್‌ನಲ್ಲಿ ಮೋಹನ್‌ ಬಾಗನ್‌ ವಿರುದ್ಧ ಆಡುವ ಅವಕಾಶ ಸಿಕ್ಕಿತು. ಅಲ್ಲಿ ಎರಡನೇ ಗೋಲು ಗಳಿಸಿದೆ. ಅಕಾಡೆಮಿಯಲ್ಲಿ ಸಿಕ್ಕಿದ ಉತ್ತಮ ತರಬೇತಿಯಿಂದ ಇದು ಸಾಧ್ಯವಾಯಿತು. ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲ್ಯು ಅಕಾಡೆಮಿಯಲ್ಲಿ ಉತ್ತಮ ತರಬೇತಿ ನೀಡುತ್ತಾರೆ. ಇದರಿಂದಾಗಿ ಈ ಸಾಧನೆ ಸಾಧ್ಯವಾಯಿತು. ಮುಂದೆ ಭಾರತದ ಪರ ಆಡಬೇಕು, ಬೆಂಗಳೂರು ಎಫ್‌ಸಿಯಲ್ಲಿ ಇನ್ನೂ ಹೆಚ್ಚು ಗೋಲು ಗಳಿಸಬೇಕು,”

Related Articles