ಹೆತ್ತವರಿಗೆ, ತರಬೇತುದಾರರಿಗೆ ಈ ಯಶಸ್ಸು ಅರ್ಪಣೆ: ಅಭಿಲಾಶ್ ಶೆಟ್ಟಿ
ಕೋಟ: ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗಿಳಿಯಾರಿನಿಂದ ಕ್ರಿಕೆಟ್ ಎಂಬ ಮ್ಯಾಜಿಕ್ ಗೇಮನ್ನು ಬೆಂಬತ್ತಿ, ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿ, ರಾಜ್ಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಲಾಶ್ ಶೆಟ್ಟಿ ಇಂದು ಕರ್ನಾಟಕ ರಾಜ್ಯ ವಿಜಯ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 17 ವಿಕೆಟ್ ಗಳಿಸಿ ಯಶಸ್ಸು ಕಂಡಿದ್ದಾರೆ. ಮೊದಲ ಪಂದ್ಯದಲ್ಲೇ 5 ವಿಕೆಟ್ ಗಳಿಸಿದ್ದಾರೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಜಯದ ರೂವಾರಿ ಎನಿಸಿದ್ದಾರೆ. ಈ ಯಶಸ್ಸನ್ನು ಅವರು ತನ್ನ ಹೆತ್ತವರಿಗೆ ಮತ್ತು ತರಬೇತುದಾರರಿಗೆ ಅರ್ಪಿಸಿದ್ದಾರೆ. ಭಾನುವಾರ www.sportsmail.net ಜೊತೆ ಮಾತನಾಡಿದ ಅವರು ತಮ್ಮ ಕ್ರಿಕೆಟ್ ಬದುಕಿನ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ. This victory is dedicated to my parent, family members and Coaches: Abhilash Shetty.
ಅಪ್ಪ-ಅಮ್ಮ, ಕೋಚ್‌ಗೆ ಅರ್ಪಣೆ:
“ನನ್ನ ಬದುಕಿನ ಹಾದಿಯಲ್ಲಿ ಸೋಲು ಗೆಲುವುಗಳ ನಡುವೆ ಸಾಂತ್ವನದ ಮಾತುಗಳನ್ನಾಡುತ್ತ ಸದಾ ಬೆಂಬಲ ನೀಡಿದ ನನ್ನ ಅಪ್ಪ ಅಮ್ಮ ಹಾಗೂ ನನ್ನನ್ನು ಒಬ್ಬ ಕ್ರಿಕೆಟಿಗನ್ನಾಗಿ ಮಾಡುವಲ್ಲಿ ಸದಾ ಶ್ರಮಿಸಿದ ತರಬೇತುದಾರರಿಗೆ ಈ ಯಶಸ್ಸನ್ನು ಅರ್ಪಿಸುತ್ತಿರುವೆ. ಏಕೆಂದರೆ ಅವರಿಲ್ಲದೆ ಈ ಯಶಸ್ಸಿನ ಹಾದಿ ತುಳಿಯಲು ಅಸಾಧ್ಯ. ನನ್ನ ಕುಟುಂಬದ ಪ್ರತಿಯೊಬ್ಬರ ಪ್ರೋತ್ಸಾಹವೂ ನನ್ನ ಯಶಸ್ಸಿಗೆ ಕಾರಣವಾಗಿದೆ,”
ಟೆನಿಸ್ ಬಾಲ್ ಕ್ರಿಕೆಟ್ ಯಶಸ್ಸಿಗೆ ಮೂಲ ಕಾರಣ:
“ನನ್ನ ಬದುಕಿನಲ್ಲಿ ಕ್ರಿಕೆಟ್ ಅಂತ ಆಟ ಆರಂಭಿಸಿದ್ದೇ ಟೆನಿಸ್ ಬಾಲ್ ಮೂಲಕ. ಈ ಟೆನಿಸ್ ಬಾಲ್‌ನಲ್ಲಿ ವೇಗ ಬೌಲಿಂಗ್ ಮಾಡುವಾಗ ಯಾವ ರೀತಿಯಲ್ಲಿ ಪೇಸ್ ಇರುತ್ತದೆಯೋ ಅದೇ ರೀತಿ ಲೆದರ್ ಬಾಲ್‌ನಲ್ಲೂ ಇರುತ್ತದೆ. ಟೆನಿಸ್ ಬಾಲ್ ಹಿನ್ನಲೆ ಇರುವುದರಿಂದ ಶೂನ್ಯದಿಂದ ಆರಂಭ ಮಾಡಬೇಕಾಗಿಲ್ಲ. ಬೌಲಿಂಗ್‌ನಲ್ಲಿ ಲಯವನ್ನು ಸಹಜವಾಗಿಯೇ ಕಂಡುಕೊಳ್ಳಬಹುದು. ಆದ್ದರಿಂದ ಟೆನಿಸ್ ಬಾಲ್ ಕ್ರಿಕೆಟ್ ನನ್ನ ಕ್ರಿಕೆಟ್ ಬದುಕಿನ ಆರಂಭಕೆ ಸಹಜವಾಗಿಯೇ ನೆರವಾಯಿತು.”
ಮೊದಲ ಪಂದ್ಯದಲ್ಲೇ ಸಿಕ್ಕ 5 ವಿಕೆಟ್, ಸೆಮಿಫೈನಲ್ ಮತ್ತು ಫೈನಲ್ ಸದಾ ಸ್ಮರಣೀಯ:
“ಒಬ್ಬ ಬೌಲರ್‌ಗೆ ಪ್ರತಿಯೊಂದು ವಿಕೆಟ್ ಕೂಡ ಪ್ರಮುಖವಾಗಿರುತ್ತದೆ. ಆದರೆ ಪಂಜಾಬ್ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಗಳಿಸಿದ 5 ವಿಕೆಟ್ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಮತ್ತು ಫೈನಲ್ ಪಂದ್ಯದಲ್ಲಿ ಗಳಿಸಿದ ವಿಕೆಟ್ ಸದಾ ನೆನಪಿನಲ್ಲಿ ಉಳಿಯುವಂಥದ್ದು.,” ಅಭಿಲಾಶ್ ಶೆಟ್ಟಿ ಈ ಬಾರಿಯ ವಿಜಯ ಹಜಾರೆ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ್ದು, ಒಟ್ಟು 17 ವಿಕೆಟ್ ಗಳಿಸಿರುತ್ತಾರೆ.
ಆತ್ಮವಿಶ್ವಾಸ ಮೂಡಿಸಿದ್ದೇ ಮಹಾರಾಜ ಟ್ರೋಫಿ:
“ಮಹಾರಾಜ ಟ್ರೋಫಿಯಲ್ಲಿ ಆಡಿರುವುದೇ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟಲು ಪ್ರಮುಖ ಕಾರಣ. ಇದಕ್ಕಿಂತ ಮೊದಲು ನಾನು ಹೆಚ್ಚು ವೈಟ್ ಬಾಲ್ ಟೂರ್ನಮೆಂಟ್ ಆಡಿರಲಿಲ್ಲ. ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಿದ್ದೆ, ಆದರೆ ಮಹಾರಾಜ ಟ್ರೋಫಿ ಅದೊಂದು ದೊಡ್ಡ ಟೂರ್ನಿ, ಅತಿ ಹೆಚ್ಚು ವಿಕೆಟ್ ಗಳಿಕೆಯಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿರುವೆ. ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ನನ್ನನ್ನು ನಾನು ನಂಬಲಾರಂಭಿಸಿದೆ. ಅದೇ ನಂಬಿಕೆ ನನ್ನಲ್ಲಿ ಮನೆ ಮಾಡಿತು. ಇದು ಯಶಸ್ಸಿಗೆ ನೆರವಾಯಿತು,”
ಯಾವುದೇ ತಂಡಕ್ಕೆ ಎಡಗೈ ಬೌಲರ್ ಹೆಚ್ಚು ಅನುಕೂಲ: ಬ್ಯಾಟಿಂಗ್‌ನಲ್ಲಿ ಎಡ ಮತ್ತು ಬಲ ಆಟಗಾರರ ಕಾಂಬಿನೇಷನ್ ಚೆನ್ನಾಗಿರುತ್ತದೆ. ಫೀಲ್ಟಿಂಗ್ ಏಕಾಗ್ರತೆಯನ್ನು ಮುರಿಯಲು ಅದು ಸಾಧ್ಯವಾಗುತ್ತದೆ. ಬೌಲರ್‌ನನ್ನೂ ಗೊಂದಲಕ್ಕೀಡು ಮಾಡಲು ನೆರವಾಗುತ್ತದೆ. ಅದೇ ರೀತಿ ಎಡಗೈ ವೇಗದ ಬೌಲರ್ ಕೂಡ ಬ್ಯಾಟ್ಟ್ಸ್‌ಮನ್‌ನ ಗೊಂದಲಕ್ಕೀಡು ಮಾಡಲು ನೆರವಾಗುತ್ತದೆ. ಬೌಲಿಂಗ್‌ನಲ್ಲಿ ಲೆಫ್ಟ್ ಮತ್ತು ರೈಟ್ ಕಾಂಬಿನೇಷನ್‌ನಿಂದ ತಂಡಕ್ಕೂ ನೆರವಾಗುತ್ತದೆ. ಬೌಲಿಂಗ್ ವಿಭಾಗದಲ್ಲಿ ವೈವಿಧ್ಯತೆ ಇದ್ದರೆ ಉತ್ತಮ. ಎಡಗೈ ಬೌಲರ್‌ಗಳು ಬಹಳ ವಿರಳ. ಅನೇಕ ಆಟಗಾರರಿಗೆ ತರಬೇತಿಯಲ್ಲೂ ಎಡಗೈ ಬೌಲರ್‌ಗಳು ಸಿಕ್ಕಿರುವುದಿಲ್ಲ. ಎಡಗೈ ಬೌಲರ್ ಬೌಲಿಂಗ್‌ಗೆ ಬಂದಾಗ ಬ್ಯಾಟ್ಸ್‌ಮನ್ ದೃಷ್ಠಿಕೋನವೂ ಬದಲಾಗುತ್ತದೆ.
ನನ್ನ ಮೊದಲ ಆಧ್ಯತೆ ದೇಶವನ್ನು ಪ್ರತಿನಿಧಿಸುವುದು:
“ಎಲ್ಲರಿಗೂ ಐಪಿಎಲ್‌ನಲ್ಲಿ ಆಡಬೇಕೆಂಬ ಹಂಬಲವಿರುತ್ತದೆ. ಅದು ಸಹಜ ಕೂಡ. ಆದರೆ ನನಗೆ ದೇಶವನ್ನು ಪ್ರತಿನಿಧಿಸಬೇಕು ಎಂಬ ಹಂಬಲ ಇದೆ. ಆದರೆ ಸದ್ಯ ಯಾವ ಟೂರ್ನಿ ನಡೆಯುತ್ತಿದೆಯೋ ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಉತ್ತಮ ಪ್ರದರ್ಶನ ನೀಡಿದರೆ ಎಲ್ಲವೂ ಸಹಜವಾಗಿಯೇ ಸಿಗುತ್ತದೆ ಎಂಬುದರಲ್ಲಿ ನಂಬಿಕೆ ಇಟ್ಟವನು ನಾನು. ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಪ್ರಸಕ್ತ ಎದುರಿರುವ ಸವಾಲಿನ ಕಡೆಗೆ ಗಮನ ಹರಿಸುವೆ. ಈಗ ಒಂದು ಟೂರ್ನಿ ನಡೆಯುತ್ತಿದ್ದೆ ಅದಕ್ಕೆ ನೂರು ಪ್ರತಿಶತ ಪರಿಶ್ರಮ ಹಾಕುವೆ. ಮುಂದೇನು ಮಾಡಬೇಕೆಂಬುದನ್ನು ಈಗಿರುವ ಜವಾಬ್ದಾರಿಯ ನಡುವೆ ಯೋಚಿಸುವುದಿಲ್ಲ. ಆದರೆ ದೇಶಕ್ಕಾಗಿ ಆಡಬೇಕೆಂಬ ʼಗೋಲ್ ಸೆಟ್” ಮಾಡಿಕೊಂಡಿರುವೆ, ಸದ್ಯ ಮುಂದೆ ಯಾವ ಟೂರ್ನಿ ಬರಲಿದೆಯೋ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವೆ,”
ಮೊದಲ ಪಂದ್ಯದಲ್ಲೇ 5 ವಿಕೆಟ್ ಗೆದ್ದಾಗ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು:
“ಮೊದಲ ಪಂದ್ಯದಲ್ಲೇ ಯಶಸ್ಸು ಕಂಡಾಗ ಖುಷಿಯಾಗುವುದು ಸಹಜ. ರಣಜಿಯಲ್ಲಿ ನನ್ನ ಪ್ರದರ್ಶನದ ಪಂದ್ಯ ಮಾಮೂಲಿಯಂತಿತ್ತು. ಆದರೆ ವಿಜಯ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ 5 ವಿಕೆಟ್ ಯಶಸ್ಸು ಕಂಡಾಗ ಮನೆಯಲ್ಲಿ ಬಹಳ ಖುಷಿ ಪಟ್ಟಿದ್ದರು. ನಾನು ಕೂಡ ಅಂದು ಭಾವುಕನಾಗಿದ್ದೆ,”
ಕ್ರಿಕೆಟ್ ಬಿಟ್ಟು ಕೆಲಸಕ್ಕೆ ಹೋಗು ಅಂದಿದ್ದಿದೆ:
“ರಾಜ್ಯದ ಪರ ಆಡಿ ಗಾಯಗೊಂಡು ಮನೆಯಲ್ಲಿ ಕುಳಿತಾಗ ಕ್ರಿಕೆಟ್ ಬಿಟ್ಟು ಏನಾದರೂ ಕೆಲಸ ಸೇರಿಕೋ ಎಂದು ಹೇಳಿದ್ದಿದೆ. ಇದು ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಬ್ಬ ಹೆತ್ತವರಲ್ಲೂ ಈ ಅಭಿಪ್ರಾಯ ಇದ್ದೇ ಇರುತ್ತದೆ. ಅವರಿಗೆ ನಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರುವುದರಿಂದ ಆ ರೀತಿಯಾಗಿ ಹೇಳುತ್ತಾರೆ. ಅದು ಸಲಹೆಯೂ ಕೂಡ. ಆದರೆ ನನ್ನ ಮೇಲೆ ನನಗೆ ನಂಬಿಕೆ ಇತ್ತು. ಆದ್ದರಿಂದ ಎಂದೂ ಕ್ರಿಕೆಟ್‌ನಿಂದ ವಿಮುಖವಾಗದೆ ಮುಂದುವರಿಸಿದೆ. ಕಠಿಣ ಅಭ್ಯಾಸ ಮಾಡಿದೆ. ಕ್ರಿಕೆಟ್‌ನಲ್ಲೇ ಬದುಕು ರೂಪಿಸಿಕೊಳ್ಳಬೇಕೆಂದು ತೀರ್ಮಾನಿಸಿದೆ.”
ಹೋಟೆಲ್ ಉದ್ಯಮ ಮಾಡಿಕೊಂಡಿರುವ ಗಿಳಿಯಾರಿನ ರಾಮ ಶೆಟ್ಟಿ ಹಾಗೂ ಗುಣರತ್ನ ದಂಪತಿಯ ಪುತ್ರ ಅಭಿಲಾಶ್ ಶೆಟ್ಟಿ. ಕೋಟ ವಿವೇಕ ಹೈಸ್ಕೂಲಿನ ಹಳೆ ವಿದ್ಯಾರ್ಥಿ ಹಾಗೂ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲೂ ಕಾಲೇಜು ವ್ಯಾಸಂಗ ಮಾಡಿರುತ್ತಾರೆ.