Thursday, November 21, 2024

ಪ್ಯಾರಿಸ್‌: ಕ್ಯಾನ್ಸರ್‌ ಗೆದ್ದವರ ಸ್ಫೂರ್ತಿಯ ಆಟ

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಯದ ನಗುವಿದೆ, ಸೋಲಿನ ನೋವಿದೆ. ಪದಕ ಗೆದ್ದ ಸಂಭ್ರಮವಿದೆ. ನೋವಿನ ಆಟವಿದೆ, ಸೋಲಿನ ಪಾಠವಿದೆ. ಆದರೆ ಸೋಲು ಗೆಲುವಿನ ನಡುವೆ ಬದುಕನ್ನೇ ಗೆದ್ದವರ ಯಶೋಗಾಥೆ ಇದೆ. ಭಾರತದ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ ಅವರು ತೈವಾನಿನ ಚೌ ಟೇನ್‌ ಚೆನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯ ಆಡುವಾಗ ಮೊದಲ ಗೇಮ್‌ ಗೆದ್ದರು. ಆದರೆ ನಂತರದ ಗೇಮ್‌ಗಳಲ್ಲಿ ಅವರ ದೇಹ ಸ್ಪಂದಿಸಲೇ ಇಲ್ಲ. ಸಾಧಾರಣ ಆಟ ಪ್ರದರ್ಶಿಸಿ ಸೋಲೋಪ್ಪಿಕೊಂಡರು. ಆದರೆ ಅವರು ಕರುಳಿನ ಕ್ಯಾನ್ಸರ್‌ ಗೆದ್ದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಬಂದಿದ್ದಾರೆಂದು ಅನೇಕರಿಗೆ ಗೊತ್ತಿರಲೇ ಇಲ್ಲ. ಅದೇ ರೀತಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಂದ್ಯ ಸೋತರೂ ಬದುಕನ್ನೇ ಗೆದ್ದ ಅನೇಕ ಕ್ರೀಡಾಪಟುಗಳ ಬದುಕಿನ ಕತೆ ಇದೆ. Top sportspersons from the world who won the cancer and participated in Paris Olympics.

ಬ್ರೆಜಿಲ್‌ನ ರಾಕ್ವೆಲ್‌ ಕೊಚಾನ್‌: ಬ್ರೆಜಿಲ್‌ನ ಮಹಿಳಾ ರಗ್ಬಿ ತಂಡದ ಆಟಗಾರ್ತಿ ರಾಕ್ವೆಲ್‌ ಕೊಚಾನ್‌ಗೆ ಪ್ಯಾರಿಸ್‌ ಮೂರನೇ ಒಲಿಂಪಿಕ್ಸ್‌. ಸ್ತನ ಕ್ಯಾನ್ಸರ್‌ನಿಂದಾಗಿ 18 ತಿಂಗಳ ಕಾಲ ಕ್ರೀಡೆಯಿಂದ ಹೊರಗಿದ್ದರೂ ಬಲಿಷ್ಠ ರಗ್ಬಿ ಆಡಲು ಅವರು ಮತ್ತೆ ತಂಡವನ್ನು ಸೇರಿಕೊಂಡು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಬ್ರೆಜಿಲ್‌ ತಂಡ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿಲ್ಲ. ಆದರೆ ರಾಕ್ವೆಲ್‌ ಜಗತ್ತಿನ ಕ್ರೀಡಾಭಿಮಾನಿಗಳ ಹೃದಯ ಗೆದ್ದರಿರುವುದು ಸ್ಪಷ್ಟ. ಪ್ರತಿಯೊಂದು ಕಷ್ಟದಲ್ಲೂ ನಾವು ನಮ್ಮ ಬದುಕಿನ ಅವಕಾಶಗಳನ್ನು ನೋಡಬೇಕೇ ಹೊರತು ಕಷ್ಟಗಳೊಂದಿಗೆ ರಾಜಿ ಮಾಡಿಕೊಳ್ಳಬಾರದು.

ಜೇನ್‌ ಮಿಚೆಲ್‌:  ಮೆದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ಮಹಿಳಾ ರೋವರ್‌ ತಂಡದ ಸ್ಪರ್ಧಿ ಜೇನ್‌ ಮಿಚೆಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಸೀಸ್‌ ತಂಡವನ್ನು ಸೇರಿಕೊಳ್ಳುತ್ತಾರೆಂದು ಯಾರೂ ಊಹಿಸಿಯೇ ಇರಲಿಲ್ಲ. 16ನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಈ ಕ್ಯಾನ್ಸರ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿರಲಿ ಬದುಕಲು ಅವಕಾಶ ನೀಡುತ್ತದೆ ಎಂದು ಜೇನ್‌ ಊಹಿಸಿರಲಿಲ್ಲ. ನಿರಂತರ ಅಭ್ಯಾಸ ಮಾಡಿ ರೋವಿಂಗ್‌ನಲ್ಲಿ ಯಶಸ್ಸು ಕಾಣಬೇಕೆಂದು ಪಣ ತೊಟ್ಟರು. ಪರಿಣಾಮ ವಿಶ್ವ ರೋವಿಂಗ್‌ ಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಇದು ಇಡೀ ಆಸೀಸ್‌ ತಂಡಕ್ಕೇ ಸ್ಫೂರ್ತಿಯಾಯಿತು. ಸಾವಿನ ದವಡೆಗೆ ಸಿಲುಕಿ ಮತ್ತೆ ಬದುಕಿದ ಜೇನ್‌ ಮಿಚೆಲ್‌ ಇಂದು ಕ್ರೀಡಾ ಜಗತ್ತಿನ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾದರು.

ಚೌ ಟೇನ್ ಚೆನ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿ ಭಾರತದ ಲಕ್ಷ್ಯ ಸೇನ್‌ ವಿರುದ್ಧ ಸೋಲನುಭವಿಸಿದ ಚೈನೀಸ್‌ ತೈಪೆಯ ಚೌ ಟೇನ್‌ ಚೆನ್‌ ಹಳ್ಳಿಯಿಂದ ಬಂದು ಆ ದೇಶದ ಬ್ಯಾಡ್ಮಿಂಟನ್‌ನಲ್ಲಿ ಪ್ರಭುತ್ವ ಸಾಧಿಸಿದ ಆಟಗಾರ. ವಿವಿಧ ಟೂರ್ನಿಗಳನ್ನು ಆಡುತ್ತಲೇ ಕರಳು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವುದು ಕೆಲವರಿಗೆ ಮಾತ್ರ ಗೊತ್ತಿತ್ತು. ತನ್ನ ಕಷ್ಟಗಳನ್ನು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಸಂಪೂರ್ಣ ಚೇತರಿಸಿಕೊಂಡ ನಂತರ ಬಯಲು ಮಾಡಿದ. ತನ್ನ ಬದುಕು ಇತರರಿಗೆ ಸ್ಫೂರ್ತಿಯಾಗಲಿ ಎಂಬುದೇ ಅವರ ಉದ್ದೇಶವಾಗಿತ್ತು. ಪ್ಯಾರಿಸ್‌ನಲ್ಲಿ ಅವರ ಆಟವನ್ನು ನೋಡಿದಾಗ ಅಲ್ಲಿ ಆಡುತ್ತಿರುವುದು ಕ್ಯಾನ್ಸರ್‌ ಗೆದ್ದವ ಎಂಬುದು ತಿಳಿಯಲಿಲ್ಲ.

ಕಾರ್ಲೆ ಕಿಶಾ: ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯ ಆರಂಭವಾಗುವುದಕ್ಕೆ ಒಂದು ತಿಂಗಳು ಬಾಕಿ ಇರುವಾಗ ಕಾರ್ಲೆ ಕಿಶಾ ಅವರಿಗೆ ಥೈರಾಯ್ಡ್‌ನಲ್ಲಿ ಕ್ಯಾನ್ಸರ್‌ ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಕಾರ್ಲೆ ಅತ್ಯಂತ ಆತ್ಮವಿಶ್ವಾಸದಲ್ಲಿ ಅಮೆರಿಕ ತಂಡವನ್ನು ಸೇರಿಕೊಂಡರು. ಪ್ರಾಥಮಿಕ ಹಂತವಾದ ಕಾರಣ ಅವರು ಬೇಗನೇ ಚೇತರಿಸಿಕೊಂಡರು.

ಐಕಿ ರಿಕಾಕೊ: 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಆರು ಚಿನ್ನದ ಪದಕ ಗೆದ್ದಿದ್ದ ಜಪಾನಿನ ಈಜು ತಾರೆ ಐಕಿ ರಿಕಾಕೊ ರಕ್ತದ ಕ್ಯಾನ್ಸರ್‌ನಿಂದಾಗಿ ಬಹಳ ಸಮಯ ಈಜಿನಿಂದ ದೂರ ಉಳಿಯಬೇಕಾಯಿತು. ಒಲಿಂಪಿಕ್ಸ್‌ ಹೊರತಾಗಿ ಉಳಿದ ಎಲ್ಲಾ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದ ರಿಕಾಕೊ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಳೆ ನಾಳೆ ಜಪಾನಿನ  ತಂಡದಲ್ಲಿ ಮಿಕ್ಸೆಡ್‌ 4X100 ರಿಲೇ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಬದುಕನ್ನೇ ಗೆದ್ದವರು ಪದಕವನ್ನೂ ಗೆಲ್ಲಲಿ.


Related Articles