ಬೆಂಗಳೂರು: ನಮ್ಮಲ್ಲಿ ಕ್ರೀಡೆಯ ಹೆಸರಿನಲ್ಲಿ ಹಣ ಮಾಡಲು ಸಾಕಷ್ಟು ಜನರಿದ್ದಾರೆ. ಆದರೆ ಅದೇ ಕ್ರೀಡೆಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳ ಪ್ರಶ್ನೆ ಬಂದಾಗ ಮೌನಕ್ಕೆ ಸರಿಯುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಲೀಗ್‌ಗಳು ನಡೆಯುತ್ತವೆ. ಹಣ ಸಂಪಾದಿಸುತ್ತಾರೆ ಮತ್ತೆ ಮರೆಯುತ್ತಾರೆ. ಈ ಪ್ರೋ ಕಬಡ್ಡಿಯನ್ನೇ ತೆಗೆದುಕೊಳ್ಳಿ ಸರಕಾರಿ ಕ್ರೀಡಾಂಗಣಗಳಿಗೆ ಬಾಡಿಗೆ ನೀಡಿ ಕೋಟ್ಯಂತರ ರೂ. ಗಳಿಸುತ್ತಾರೆ. ಪ್ರೋ ಕಬಡ್ಡಿ ಲೀಗ್ ಪ್ರಸಾರದ ಹಕ್ಕಿನಿಂದ 900 ಕೋಟಿ ರೂ. ಬಂದಿದೆ. ಫ್ರಾಂಚೈಸಿಗಳು ನೂರು ಕೋಟಿ ರೂ. ಮೌಲ್ಯ ತಲುಪಿವೆ ಆದರೆ ಕಬಡ್ಡಿಗಾಗಿಯೇ ಒಂದು ಕ್ರೀಡಾಂಗಣ ಇಲ್ಲ. ಈಗ ಹೇಳ ಹೊರಟಿದ್ದು ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಕಬಡ್ಡಿ ಅಂಗಣದ ದುರಂತ ಕತೆ. ಅಲ್ಲಿರುವ ಹೊನಲು ಬೆಳಕಿನ ಕಂಬಗಳು ಕಬಡ್ಡಿಯ ದುರಂತ ಕತೆಯನ್ನದು ಹೇಳುತ್ತಿವೆ. Tragedy story of a Kabaddi ground in Upparpete Mejestic Bengaluru
ಇದು ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಉಪ್ಪಾರಪೇಟೆಯ ಕಬಡ್ಡಿ ಕ್ರೀಡಾಂಗಣ, ಇದು ಶಾಲಾ ಮಕ್ಕಳಿಗೆ ಕ್ರಿಕೆಟ್ ಅಂಗಣವಾದರೆ, ನಿರಾಶ್ರಿತರಿಗೆ ರಾತ್ರಿ ಮಲಗುವ ಮನೆಯಾಗಿದೆ. ಇದರ ಸುತ್ತಲೂ ಯಾರೂ ಮುಟ್ಟಬಾರದು ಎಂಬಂತೆ ದೇವಸ್ಥಾನವನ್ನು ಕಟ್ಟಿಕೊಳ್ಳಲಾಗಿದೆ. ಇದು 1960ರ ಸುಮಾರಿಗೆ ಕಬಡ್ಡಿಗಾಗಿಯೇ ನಿರ್ಮಿಸಲಾದ ಕ್ರೀಡಾಂಗಣ. ಇಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಗಳು ನಡೆಯುತ್ತಿತ್ತು. ಬೆಂಗಳೂರಿನಲ್ಲಿ ಕ್ಲಬ್‌ಗಳು ಇಲ್ಲಿ ತರಬೇತಿ ಪಡೆಯುತ್ತಿದ್ದವು. ಕಬಡ್ಡಿ ಕ್ರೀಡೆ ಈಗ ಕ್ರಿಕೆಟ್‌ನಂತೆ ಆದಾಯ ತರುವ ಕ್ರೀಡೆಯಾಗಿ ಬೆಳೆದು ನಿಂತರೂ ಇಲ್ಲಿಯ ಕಬಡ್ಡಿ ಅಭಿಮಾನಿಗಳಿಗೆ ಈ ಕ್ರೀಡಾಂಗಣಕ್ಕೆ ಹೊಸ ರೂಪ ಕೊಡುವ ಮನಸ್ಸಾಗಲಿಲ್ಲ. ಬಿಬಿಎಂಪಿ ಸೋಮಾರಿಯಾಗಿ ಕಾಲ ಕಳೆಯುತ್ತಿದೆ. ಬೆಂಗಳೂರಿನಲ್ಲಿ ಈ ರೀತಿಯ ನೂರಾರು ಕ್ರೀಡಾಂಗಣಗಳಿವೆ ಅವುಗಳನ್ನು ಖಾಸಗಿ ಶಾಲೆಗಳಿಗೆ ಲೀಸ್ ನೀಡಿ ಕೈ ತೊಳೆದುಕೊಳ್ಳಲಾಗಿದೆ.ಮೆಟ್ರೋ ರೈಲು ನಿಲ್ದಾಣ, ಬಸ್ ನಿಲ್ದಾಣ ಎಲ್ಲವೂ ಕೂಗಳತೆಯ ದೂರದಲ್ಲಿ ಇರುವುದರಿಂದ ಇಲ್ಲಿ ಅಭ್ಯಾಸಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ರಾಜ್ಯದ ಹಿರಿಯ ಆಟಗಾರರಾದ ಬಿ.ಸಿ. ರಮೇಶ್. ಬಿ.ಸಿ. ಸುರೇಶ್, ಷಣ್ಮುಗಂ, ಎ. ನಾಗರಾಜ್ ಮೊದಲಾದ ಆಟಗಾರರು ಇಲ್ಲಿ ಅಭ್ಯಾಸ ಮಾಡಿ ಜಾಗತಿಕ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆದರೆ ಈಗ ಈ ಕ್ರೀಡಾಂಗಣ ಅನಾಥವಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಕಬಡ್ಡಿಗಾಗಿಯೇ ಪ್ರತ್ಯೇಕ ಅಂಗಣವಿದ್ದಿತ್ತು, ಆದರೆ ಕಬಡ್ಡಿ ನಡೆಯಲೇ ಇಲ್ಲ. ಶ್ರೀನಿವಾಸ ನಗರದ ಬ್ಯಾಂಕ್ ಕಾಲನಿಯಲ್ಲಿ ಕಬಡ್ಡಿಗಾಗಿಯೇ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು, ಆದರೆ ಅಲ್ಲಿ ಈಗ ಕ್ರಿಕೆಟ್ ನಡೆಯುತ್ತಿದೆ. ಚಾಮುಂಡೇಶ್ವರಿ ಕಬಡ್ಡಿ ಕ್ಲಬ್‌ಗಾಗಿ ಜಯನಗರದಲ್ಲಿ ಕ್ರೀಡಾಂಗಣ ಕ್ರೀಡಾಂಗಣ ಸ್ಥಾಪಿಸಲಾಯಿತು. ನ್ಯೂ ಭಾರತ್ ಕಬಡ್ಡಿ ಕ್ಲಬ್‌ಗಾಗಿ ತ್ಯಾಗರಾಜ ನಗರದಲ್ಲಿ ಕಬಡ್ಡಿ ಅಂಗಣ ಸ್ಥಾಪಿಸಲಾಗಿತ್ತು. ಬಸವನಗುಡಿಯಲ್ಲೂ ಕಬಡ್ಡಿಗಾಗಿ ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಮಲ್ಲೇಶ್ವರದಲ್ಲೂ ಕಬಡ್ಡಿ ಅಂಗಣವಿದ್ದಿತ್ತು. ಈಗೆಲ್ಲ ಅಲ್ಲಿ ಯಾವ ಆಟ ನಡೆಯುತ್ತಿದೆಯೋ ದೇವರೇ ಬಲ್ಲ.
ಉಪ್ಪಾರಪೇಟೆಯಲ್ಲಿರುವ ಕಬಡ್ಡಿ ಅಂಗಣವನ್ನು ಪುನರಜ್ಜೀವನಗೊಳಿಸಿ, ಅಲ್ಲಿ ಮ್ಯಾಟ್ ಅಳವಡಿಸಿ, ಒಬ್ಬ ಕೋಚ್ ನೇಮಿಸಿದರೆ ಹತ್ತಿರದಲ್ಲಿರುವ ಯುವ ಆಟಗಾರರು ಅಭ್ಯಾಸ ನಡೆಸಿ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅದು ಅನಾಥರ, ಬೀದಿ ಬಿಕಾರಿಗಳ, ಅನೈತಿಕ ವ್ಯವಹಾರನ ಡೆಸುವವರಿಗೆ ಆಶ್ರಯವಾಗಿ ಮುಂದುವರಿಯಲಿದೆ.