ಸೋಮಶೇಖರ್ ಪಡುಕರೆ, ಬೆಂಗಳೂರು
ಜಗತ್ತಿನ ಅತ್ಯಂತ ಅಪಾಯಕಾರಿ ಮೋಟಾರ್ ರ‍್ಯಾಲಿ ಡಕಾರ್‌ನಲ್ಲಿ ಭಾಗವಹಿಸುವ ಕನಸು ಕಂಡಿರುವ ಬೆಂಗಳೂರಿನ ಅಲೀನಾ ಮನ್ಸೂರ್ ಶೇಖ್ ಅವರ ಸಾಹಸ ಕ್ರೀಡೆಗೆ ಆರ್ಥಿಕ ನೆರವಿನ ಅಗತ್ಯವಿದೆ. 12 ವರ್ಷ ಪ್ರಾಯದ ಅಲೀನಾ ಈಗಾಗಲೇ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ 30ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದು, ಭಾರತದಲ್ಲಿ ನಡೆಯಲಿರುವ ಮಿನಿಜಿಪಿ ವಿಶ್ವಸರಣಿಗೆ ಆಯ್ಕೆಯಾದ ಅಲೀನಾ ಅವರ ಕ್ರೀಡಾ ಸಾಧನೆಗಾಗಿ ಅವರ ತಂದೆ ಮನ್ಸೂರ್ ಈಗಾಗಲೇ 60ಲಕ್ಷಕ್ಕೂ ಹೆಚ್ಚು ಹಣವನ್ನು ವೆಚ್ಚ ಮಾಡಿದ್ದು, ಮುಂದಿನ ಯಶಸ್ಸಿಗಾಗಿ ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ.
ಚಿಕ್ಕಂದಿನಲ್ಲೇ ಬೈಕ್ ಕ್ರೇಜ್: ಬಡ ಕುಟುಂಬದಿಂದ ಬಂದ ಮನ್ಸೂರ್ ಅವರಿಗೆ ಬೈಕ್ ರೈಡಿಂಗ್ ಬಗ್ಗೆ ಬಹಳ ಆಸಕ್ಕಿ. ಈ ಕಾರಣಕ್ಕಾಗಿ ದುಡಿಯಲು ಆರಂಭಿಸಿದ ನಂತರ ಒಂದು ಸೂಪರ್ ಬೈಕ್ ಖರೀದಿಸಿದ್ದರು. ಆ ಬೈಕ್‌ನಲ್ಲಿ ಮಗಳನ್ನು ಕೂರಿಸಿಕೊಂಡು ನಗರ ಸುತ್ತುತ್ತಿದ್ದರು. ಇದು ಅಲೀನಾಗೆ ಬೈಕ್ ರೈಡಿಂಗ್ ಬಗ್ಗೆ ಆಸಕ್ತಿ ಬೆಳೆಯಲು ಪ್ರಮುಖ ಕಾರಣವಾಯಿತು. ಮಗಳ ಆಸಕ್ತಿಯನ್ನು ಕಂಡು ಮನ್ಸೂರ್ 25 ಸಾವಿರ ನೀಡಿ ಎರಡು ಚೀನಾ ನಿರ್ಮಿತ ಪುಟ್ಟ ಬೈಕ್ ಖರೀದಿಸಿದರು. ಅದು ಕೆಲ ಸಮಯದಲ್ಲೇ ತಾಂತ್ರಿಕ ದೋಷ ಕಂಡು ಮೂಲೆ ಸೇರಿತು. ಆದರೆ ಅಲೀನಾಳ ಬೈಕ್ ರೈಡಿಂಗ್ ಆಸಕ್ತಿ ಮೂಲೆ ಗುಂಪಾಗಲಿಲ್ಲ.
9ನೇ ವರ್ಷಕ್ಕೆ 3 ಲಕ್ಷ ಬೆಲೆಯ ಬೈಕ್!: “ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಟ್ಟು ಬದ್ಧತೆ ಹೆಚ್ಚು. ಆದರೆ ನನ್ನ ಮಗಳು ಈ ಎಲ್ಲವನ್ನೂ ದಾಟಿ ವಿಶ್ವದರ್ಜೆಯ ಬೈಕ್ ರೈಡರ್ ಆಗಬೇಕೆಂಬ ಕಸನು ಕಂಡಿರುವೆ,” ಎನ್ನುತ್ತಾರೆ ಮನ್ಸೂರ್. ಅದಕ್ಕಾಗಿಯೇ 9ನೇ ವಯಸ್ಸಿನಲ್ಲಿರುವಾಗ 3ಲಕ್ಷ ರೂ. ಬೆಲೆಯ ರ‍್ಯಾಲಿ ಬೈಕ್ ಖರೀದಿಸಿ ಮಗಳಿಗೆ ನೀಡಿದರು. ಎಂಆರ್‌ಎಫ್ ರೇಸಿಂಗ್‌ನಲ್ಲಿ ಪರೀಕ್ಷೆಗೆ ಕಳುಹಿಸಿದಾಗ 50ಸಿಸಿ ಬೈಕ್ ಅಗತ್ಯವಿದೆ ಎಂದು ಹೇಳಿದರು. ಅದು ಕೆಟಿಎಂ ಬ್ರಾಂಡ್‌ನಲ್ಲಿ ಸಿಗುತ್ತದೆ ಎಂದು ಸೂಚಿಸಿದರು. ಆಗ ಮನ್ಸೂರ್ ಅವರು 3 ಲಕ್ಷ ಬೆಲೆಯ ಬೈಕ್ ಅನ್ನು 1.5 ಲಕ್ಷಕ್ಕೆ ಮಾರಬೇಕಾಯಿತು.
ಆನ್‌ಲೈನ್‌ನಲ್ಲಿ ಮೋಸ: ಮಗಳಿಗಾಗಿ ಕೆಟಿಎಂ 50ಸಿಸಿ ಸೆಕೆಂಡ್ ಹ್ಯಾಂಡ್ ಬೈಕ್‌ಗಾಗಿ ಮನ್ಸೂರ್ ಹುಡುಕಾಟ ಮಾಡಿದರು. ಆಗ ಇಂದೋರ್‌ನಲ್ಲಿ ಒಬ್ಬರಲ್ಲಿ ಈ ಬೈಕ್ ಇರುವುದು ಆನ್‌ಲೈನ್ ಮೂಲಕ ತಿಳಿಯಿತು.. ಅದರ ಬೆಲೆ 3.50ಲಕ್ಷ ರೂ. ಈ ಮೊತ್ತ ನೀಡಲು ಒಪ್ಪಿದ ಮನ್ಸೂರ್ ಹಣ ನೀಡಿ ಬೈಕ್ ಖರೀದಿಸದರು. ಆದರೆ ಫೋಟೋದಲ್ಲಿ ತೋರಿಸಿದ ಬೈಕ್ ಬೇರೆಯಾಗಿತ್ತು, ಮನೆಗೆ ಬಂದ ಬೈಕ್ ಬೇರೆಯೇ ಆಗಿತ್ತು. ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬೈಕ್ ಖರೀದಿಸಲು ಹೋಗಿ ಮನ್ಸೂರ್ ಕೈಸುಟ್ಟುಕೊಂಡರು. ಅದಕ್ಕೆ ಮತ್ತೆ ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಲೇ 1.50ಲಕ್ಷ ರೂ. ಮನ್ಸೂರ್ ಅವರ ಕೈಯಿಂದ ಜಾರಿತು. ಹೇಗೂ ಮಗಳನ್ನು ಸ್ಪರ್ಧೆಗೆ ಕಳುಹಿಸಲು ಬೈಕ್ ಸಜ್ಜುಗೊಳಿಸಿದರು. ಕೊಯಮತ್ತೂರು ಮತ್ತು ಬೆಂಗಳೂರಿನಲ್ಲಿ ಎರಡು ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಲೇ ಬೈಕ್ ಮತ್ತೆ ದುರಸ್ತಿಗೆ ಬಂತು. ಕೊನೆಗೆ ಆ ಬೈಕನ್ನೂ ಮಾರಿ, ಅಂತಿಮವಾಗಿ ದುಬೈಯಿಂದ 65ಸಿಸಿ ಸಾಮರ್ಥ್ಯದ ಬೈಕ್ ಖರೀದಿಸಿ ಮಗಳನ್ನು ರ‍್ಯಾಲಿಗೆ ಸಜ್ಜುಗೊಳಿಸಿದರು.
30ಕ್ಕೂ ಹೆಚ್ಚು ಟ್ರೋಫಿ ಗೆದ್ದ ಸಾಧಕಿ: 2019ರಲ್ಲಿ ಅಲೀನಾ ದೇಶಾದ್ಯಂತ ನಡೆದ 6 ರೇಸ್‌ಗಳಲ್ಲಿ 5ರಲ್ಲಿ ಪಾಲ್ಗೊಂಡಳು. ಅಜ್ಜ ತೀರಿಕೊಂಡ ಕಾರಣ ಒಂದು ರೇಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದಾಗಿ ಸಮಗ್ರ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಭಾಗವಹಿಸಿದ 13 ಸ್ಪರ್ಧಿಗಳಲ್ಲಿ 12 ಬಾಲಕರು, ಒಬ್ಬಳೇ ಬಾಲಕಿ ಅಲೀನಾ! ಕೇರಳ, ವಡೋದರ ಹಾಗೂ ಪುಣೆ ಸೇರಿದಂತೆ ಆಹ್ವಾನಿತ ರೇಸ್‌ಗಳಲ್ಲಿ ಅಲೀನಾ ಸ್ಪರ್ಧಿಸಿದಳು. ಎಫ್‌ಎಂಎಸ್‌ಸಿ ನಡೆಸುವ ರ‍್ಯಾಲಿಗಳಲ್ಲಿ ಪಾಲ್ಗೊಂಡು ಒಟ್ಟು 30ಕ್ಕೂ ಹೆಚ್ಚು ಟ್ರೋಫಿಗಳನ್ನು ತನ್ನದಾಗಿಸಿಕೊಂಡಳು.
ದುಬೈ ಡಿಎಂಎಕ್ಸ್‌ನಲ್ಲಿ ತರಬೇತಿ: ಜಗತ್ತಿನ ದುಬಾರಿ ಬೈಕ್ ತರಬೇತಿ ಕೇಂದ್ರಗಳಲ್ಲಿ ಒಂದಾಗಿರುವ ದುಬೈ ಡಿಎಂಎಕ್ಸ್‌ನಲ್ಲಿ ತರಬೇತಿ ಪಡೆಯುವಲ್ಲಿ ಅಲೀನಾ ಯಶಸ್ವಿಯಾದಳು. ಒಂದೆರಡು ಬಾರಿ ತರಬೇತಿ ಪಡೆದು ಆರ್ಥಿಕ ಸಮಸ್ಯೆಯ ಕಾರಣ ನಿರಂತರ ತರಬೇತಿ ಪಡೆಯಲಾಗಲಿಲ್ಲ. ಇಲ್ಲಿ 2-3 ಗಂಟೆ ಅಭ್ಯಾಸಕ್ಕೆ 5-6 ಸಾವಿರ ರೂ. ತೆರಬೇಕಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಅಲ್ಲಿ ಅಭ್ಯಾಸಕ್ಕೆ ಅವಕಾಶ. ವಿಪರೀತ ಬಿಸಿಲು ಇದಕ್ಕೆ ಕಾರಣ. ಮೋಟೋಕ್ರಾಸ್‌ನಲ್ಲಿ ಉತ್ತಮ ಅಭ್ಯಾಸ ನಡೆಸಿದ ಅಲೀನಾ 2020ರಲ್ಲಿ ಸ್ಪರ್ಧಿಸಿದ 3 ರೇಸ್‌ಗಳಲ್ಲಿ ಎರಡರಲ್ಲಿ ಎರಡನೇ ಸ್ಥಾನ ಗಳಿಸಿ ಮೆಚ್ಚುಗೆಗೆ ಪಾತ್ರಳಾದಳು. 2021ರಲ್ಲಿ ಕೊರೋನಾ ಕಾರಣ ಯಾವುದೇ ಸ್ಪರ್ಧೆ ನಡೆದಿರಲಿಲ್ಲ.
ಡಕಾರ್, ಎಫ್‌ಐಎಂಎಂಎಕ್ಸ್ ಕನಸು: ಇದುವರೆಗೂ ಆರು ಬೈಕ್‌ಗಳನ್ನು ಬದಲಾಯಿಸಿರುವ ಅಲೀನಾಗೆ ಜಾಗತಿಕ ಮಟ್ಟದ ರ‍್ಯಾಲಿಗಳಲ್ಲಿ ಸ್ಪರ್ಧಿಸುವ ಕನಸು. ಆದರೆ ವಯಸ್ಸು ಇನ್ನೂ 12. ಮನ್ಸೂರ್ ಅವರು ಮಗಳ ಕನಸನ್ನು ನನಸಾಗಿಸುವ ಗುರಿ ಹೊಂದಿದ್ದಾರೆ. “ಈಗ ಅಲೀನಾಗೆ 12 ವರ್ಷ. ಜಾಗತಿಕ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆ ನಡೆಸುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಹಂಬಲವಿದೆ. 14 ವರ್ಷವಯೋಮಿತಿಯ ಮೋಟೋಜಿಪಿ1, 2, 3ಗಳಲ್ಲಿ ಮಾತ್ರವಲ್ಲ 18 ವರ್ಷ ಪೂರ್ಣಗೊಂಡ ಬಳಿಕ ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ರ‍್ಯಾಲಿಯಲ್ಲಿಯೂ ಭಾರತವನ್ನು ಪ್ರತಿನಿಧಿಸುವ ಹಂಬಲವಿದೆ, ಈ ಕನಸು ನನಸಾಗಲು ಪ್ರಾಯೋಜಕರ ನೆರವಿನ ಅಗತ್ಯವಿದೆ. ಈಗಾಗಲೇ ಮಗಳ ಬೈಕ್ ರೇಸ್‌ಗಾಗಿ 60ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡಿರುವೆ. ಈ ಸಾಹಸದ ಕ್ರೀಡೆಗಳಿಗೆ ಸಾಕಷ್ಟು ಆರ್ಥಿಕ ನೆರವಿನ ಅಗತ್ಯವಿರುತ್ತದೆ. ರೇಸಿಂಗ್ ಕಂಪೆನಿಗಳು, ಕ್ರೀಡಾಭಿಮಾನಿಗಳು ನೆರವು ನೀಡಿದರೆ, ಅಲೀನಾಳ ಕನಸು ನನಸಾಗಲು ಸಾಧ್ಯ,” ಎನ್ನುತ್ತಾರೆ ಕ್ರೀಡಾಭಿಮಾನಿ ಮನ್ಸೂರ್.
ಟ್ರೈಬಲ್ ಅಡ್ವೆಂಚರ್ ಕೆಫೆ: ಅಂತಾರಾಷ್ಟ್ರೀಯ ರ‍್ಯಾಲಿ ಪಟು ಟ್ರೈಬಲ್ ಸಂಜಯ್ ಅವರು ಸ್ಥಾಪಿಸಿರುವ ಟ್ರೈಬಲ್ ಅಡ್ವೆಂಚರ್ ಕೆಫೆ ಇಲ್ಲಿ ಅಲೀನಾ ತರಬೇತಿ ಪಡೆಯುತ್ತಿದ್ದಾಳೆ. ಆಕೆಯ ತಂಗಿ ಜೀನತ್ ಕೂಡ ರ‍್ಯಾಲಿಯಲ್ಲಿ ಆಸಕ್ತಿ ಹೊಂದಿದ್ದು ಸದ್ಯ ಕಾರ್ಟಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಬೆಂಗಳೂರಿನ ಚಿಕ್ಕಬಾಣಾವರದ ಎಡಿಫೈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲೀನಾಳ ರ‍್ಯಾಲಿ ಬದುಕಿಗೆ ಉಳ್ಳವರ, ಕ್ರೀಡಾಭಿಮಾನಿಗಳ ಪ್ರೋತ್ಸಾಹವಿರಲಿ.