Thursday, November 21, 2024

Udupi Cricket ಉಡುಪಿಗೆ ಕೆಎಸ್‌ಸಿಎ ಕ್ರಿಕೆಟ್‌ ಸ್ಟೇಡಿಯಂ ಅಗತ್ಯವಿದೆ

ಉಡುಪಿಯಲ್ಲಿ ಸಾಕಷ್ಟು ಕ್ರಿಕೆಟ್‌ ಪ್ರತಿಭೆಗಳಿದ್ದಾರೆ. ಕನಸುಗಳನ್ನು ಹೊತ್ತ ಆಟಗಾರರಿದ್ದಾರೆ. ಕ್ರೀಡಾಂಗಣಕ್ಕೆ ಅಗತ್ಯವಿರುವ ಭೂಮಿಯೂ ಇದೆ ಆದರೆ ಈ ಜಿಲ್ಲೆಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ಅಗತ್ಯವಿರುಗ ಕ್ರೀಡಾಂಗಣವೇ ಇಲ್ಲದಂತಾಗಿದೆ. Udupi District need a KSCA Cricket Stadium.

ಉಡುಪಿಯ ಎಂಜಿಎಂ ಕಾಲೇಜಿನ ಅಂಗಣದಲ್ಲಿ 1978-79ರಲ್ಲಿ ರಣಜಿ ಪಂದ್ಯ ನಡೆದ ಮೇಲೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಇಲ್ಲಿಯ ಕ್ರಿಕೆಟ್‌ ಅಭಿವೃದ್ಧಿಯ ಬಗ್ಗೆ ಗಮನವೇ ಹರಿಸಲಿಲ್ಲ. ಮಂಗಳೂರು ವಲಯವಿದ್ದರೂ ಅದರ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳೇ ಇಲ್ಲದಂತಾಗಿದೆ. ಇಲ್ಲಿ ಚಿಕ್ಕಂದಿನಲ್ಲಿ ಕ್ರಿಕೆಟ್‌‌ ಕಲಿತವರು ನಂತರ ಬೆಂಗಳೂರಿನಲ್ಲಿ ಯಾವುದೋ ಕಾಲೇಜನ್ನು ಸೇರಿಕೊಂಡು ಅಲ್ಲಿಯೇ ಕ್ರಿಕೆಟ್‌ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಬಡವರ ಮಕ್ಕಳು ಒಂದು ಹಂತದವರೆಗೆ ಕ್ರಿಕೆಟ್‌‌ ಆಡಿ, ಪ್ರತಿಭೆ ಇದ್ದರೂ ಮತ್ತೆ ಮುಂದುವರಿಯಲಾಗದೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ. ಈ ಸಮಸ್ಯೆಗಳ ನಡುವೆಯೂ ರಾಜ್ಯ ಕಿರಿಯರ ತಂಡದಲ್ಲಿ ಉಡುಪಿ ಜಿಲ್ಲೆಯ ಯುವ ಪ್ರತಿಭೆಗಳು ಅವಕಾಶ ಕಡೆದಿರುವುದು ಸ್ವಾಗತಾರ್ಹ. ಇನ್ನೂ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯ ಸಿಕ್ಕರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರಿಕೆಟಿಗರಿಗೆ ಅವಕಾಶ ಸಿಗುವುದು ಖಚಿತ. ಉಡುಪಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ ಎಂಬ ಒಂದು ಸಂಸ್ಥೆ ಇದೆ ಎಂಬುದೇ ಈ ಜಿಲ್ಲೆಯ ಕ್ರಿಕೆಟ್‌ ಅಭಿಮಾನಿಗಳಿಗೆ ಗೊತ್ತಿಲ್ಲದ ಪರಿಸ್ಥಿತಿ. ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಇರುವ ಕೆಲವು ಅಕಾಡೆಮಿಗಳು ತಮ್ಮ ಕಾರ್ಯವನ್ನು ಮಾಡುತ್ತಿವೆಯೇ ಹೊರತು ಉಡುಪಿ ಜಿಲ್ಲೆಯಿಂದ ಹೆಚ್ಚಿನ ಮಕ್ಕಳು ರಾಜ್ಯ ಕ್ರಿಕೆಟ್‌ ತಂಡವನ್ನು ಸೇರುವುದು ಹಗಲುಗನಸಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್‌ ಭಟ್‌ ಅವರು, “ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲೂ ಟರ್ಫ್‌ ಅಂಗಣವನ್ನು ನಿರ್ಮಿಸುವ ಯೋಜನೆ ಇದೆ,” ಎನ್ನುತ್ತಾರೆ. ಈಗಾಗಲೇ ಜಿಲ್ಲೆಯ ಕೆಲವು ಕಾಲೇಜುಗಳೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಪ್ರತಿ ಬಾರಿಯೂ ಹೀಗೆಯೇ ಆಗುತ್ತದೆಯೇ ಹೊರತು ಯಾವುದೇ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ನಿಟ್ಟೆಯಲ್ಲಿರುವ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ತರಬೇತಿ ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದು ತರಬೇತಿಗೆ ಸೂಕ್ತವಾಗಿರಬಹುದು, ಆದರೆ ಉಡುಪಿಗೆ ಕೇಂದ್ರವಾಗುವುದಿಲ್ಲ. ದೂರದ ಊರಿನಿಂದ ಬರುವ ಮಕ್ಕಳಿಗೆ ಕಷ್ಟವಾಗುತ್ತದೆ. ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಕ್ರೀಡಾಂಗಣವೇ ಸ್ಥಾಪನೆಯಾದರೆ ಎಲ್ಲರಿಗೂ ಅನುಕೂಕಲವಾಗುತ್ತದೆ.

ಎಂಜಿಎಂ ಕಾಲೇಜು ಅಂಗಣ: ಉಡುಪಿಯ ಎಂಜಿಎಂ ಕಾಲೇಜಿನ ಸಮೀಪವಿರುವ ಕ್ರೀಡಾಂಗಣವನ್ನು ಕ್ರಿಕೆಟ್‌ಗೆ ಬಳಸಿಕೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ. 45 ವರ್ಷಗಳ ಹಿಂದೆ ರಣಜಿ ಪಂದ್ಯ ನಡೆದದ್ದೂ ಇಲ್ಲಿಯೇ. ಹಿಂದೊಮ್ಮೆ ಉಪ್ಪೂರು ಸಮೀಪವಿರುವ ಭೂಮಿಯನ್ನು ಕೆಎಸ್‌ಸಿಎಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೀಡಿನ ಗುಡ್ಡೆಯಲ್ಲೂ ಕ್ರೀಡಾಂಗಣಕ್ಕೆ ಅನುಕೂಲವಾದ ಸರಕಾರಿ ಭೂಮಿ ಇದೆ. ಕ್ರೀಡಾಂಗಣ ಸ್ಥಾಪನೆಗೆ ಕನಿಷ್ಠ 10 ಎಕರೆ ಭೂಮಿಯಾದರೂ ಬೇಕು. ಇಲ್ಲಿಯ ಮಾಜಿ ಆಟಗಾರರು, ಜನಪ್ರತಿನಿಧಿಗಳು ಹಾಗೂ ಹಿರಿಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೆ ಪ್ರಯೋಜನವಾಗಬಹುದು. ಇಲ್ಲಿ ಜಾಗ ಲಭ್ಯತೆಯ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಗಮನಕ್ಕೆ ತಂದರೂ ಪ್ರಯೋಜವಾಗಬಹುದು.

ಗೋವಾ ಪರ ರಣಜಿ ಆಡಿ ನಂತರ ಯುಎಇ ತಂಡವನ್ನು ಪ್ರತಿನಿಧಿಸಿದ್ದ ದಯಾನಂದ ಬಂಗೇರ ಈಗ ಉಡುಪಿಯಲ್ಲೇ ನೆಲೆಸಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕರಾದ ವಿಜಯ್‌ ಆಳ್ವಾ ಮತ್ತು ಉದಯ್‌ ಕುಮಾರ್‌ ಸೇರಿದಂತೆ ಇತರರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಉಡುಪಿಯಲ್ಲಿ ಒಂದು ಕ್ರಿಕೆಟ್‌ ಸ್ಟೇಡಿಯಂ ಸ್ಥಾಪಿಸಲು ಸಾಧ್ಯವಾಗಬಹದು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ ಕಾರ್ಯದರ್ಶಿ, ಐಪಿಎಲ್‌ ಮಾಜಿ ಚೇರ್ಮನ್‌ ಬ್ರಿಜೇಶ್‌ ಪಟೇಲ್‌ ಕೂಡ ಉಡುಪಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂ ಅಗತ್ಯವಿದೆ ಎಂದಿದ್ದಾರೆ. ಈಗ ರಾಜ್ಯ ಕ್ರಿಕೆಟ್‌ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್‌ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರುತ್ತಿದೆ. ಇದರ ಸದುಪಯೋಗವನ್ನು ಉಡುಪಿಯ ಕ್ರಿಕೆಟ್‌ ಆಸಕ್ತರು ಸದುಪಯೋಗಪಡಿಸಿಕೊಳ್ಳಲು ಸೂಕ್ತ ಕಾಲ.

Related Articles