Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿರಾಟ್‌ ಕೊಹ್ಲಿಯು ಸಚಿನ್‌ ದಾಖಲೆ ಮುರಿಯಲಿ, ನೀವು ನಿಮ್ಮ ಸಂಬಂಧ ಮುರಿದುಕೊಳ್ಳಬೇಡಿ!

ಕೋಲ್ಕೊತಾದ ಈಡನ್‌ ಗಾರ್ಡನ್‌ನಲ್ಲಿ ವಿರಾಟ್‌ ಕೊಹ್ಲಿ 49ನೇ ಶತಕ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಮುಂದಿನ ಪಂದ್ಯಗಳಲ್ಲಿ ಅವರು 50ನೇ ಶತಕ ಸಿಡಿಸಿ ಸಚಿನ್‌ ದಾಖಲೆ ಮುರಿಯಬಹುದು. ಏಕೆಂದರೆ ವಿರಾಟ್‌ ಅವರಿಗೆ ಅಷ್ಟು ಸಾಮರ್ಥ್ಯ ಮತ್ತು ಕಾಲಾವಕಾಶ ಇದೆ. ಅವರು ದಾಖಲೆ ಮುರಿಯಲಿ ನೀವು ಸಂಬಂಧ ಮುರಿದುಕೊಳ್ಳಬೇಡಿ, Virat Kohli will break Sachin records but you don’t break your relationship!

ವಿರಾಟ್‌ ದಾಖಲೆ ಸರಿಗಟ್ಟುದ್ದಿಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಸಚಿನ್‌ ತೆಂಡೂಲ್ಕರ್‌ ಅಭಿನಂದನೆ ಸಲ್ಲಿಸಿದ್ದಾರೆ. ಸಚಿನ್‌ ಅವರಿಗೂ ಭಾರತೀಯರೊಬ್ಬರು ತಮ್ಮ ದಾಖಲೆ ಮುರಿಯಬೇಕೆಂಬುದು ಆಶಯವಾಗಿತ್ತು. ವಿರಾಟ್‌ ತನ್ನ 35ನೇ ಹುಟ್ಟು ಹಬ್ಬದ ದಿನದಂದೇ ದಾಖಲೆ ಮುರಿದಿರುವುದು ವಿಶೇಷವಾಗಿದೆ. ಆದರೆ ಕೊಹ್ಲಿ ಅವರ ಈ ಸಾಧನೆ ಸಚಿನ್‌ ಮತ್ತು ಕೊಹ್ಲಿ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ಕೊಹ್ಲಿಯ ಕೆಲವು ಅಭಿಮಾನಿಗಳು “ಕ್ರಿಕೆಟ್‌ನ ಹೊಸ ದೇವರ ಅವತಾರವಾಗಿದೆ,” ಎಂದು ಹೇಳಿದರೆ, ಸಚಿನ್‌ ಅಭಿಮಾನಿಗಳು, “ದೇವರು ಒಬ್ಬನೇ ನಾಮ ಹಲವು” ಎಂಬಂತೆ ಪ್ರತಿಕ್ರಿಯೆ ನೀಡಿರುತ್ತಾರೆ. ಕೆಲವರು ವಿರಾಟ್‌ ಕೊಹ್ಲಿ ಸ್ವಾರ್ಥದ ಶತಕ ಎಂದು ಟೀಕಿಸಿದೆ, ಕೊಹ್ಲಿ ಅಭಿಮಾನಿಗಳು, “ಈಡನ್‌ ಗಾರ್ಡನ್‌ನಲ್ಲಿ ಆವೇಶದ ಆಟವಾಡಿದರೆ ದಕ್ಷಿಣ ಆಫ್ರಿಕಾದ ಸ್ಥಿತಿ ಭಾರತಕ್ಕೆ ಆಗುತ್ತಿತ್ತು, ಅಲ್ಲಿಯ ಪಿಚ್‌ನಲ್ಲಿ ಶತಕ ಸಿಡಿಸಿದ್ದು ನಿಜವಾಗಿಯೂ ಜವಾಬ್ದಾರಿಯುತ ಆಟ, #KingKohli ಎಂದು ಪ್ರತಿಕ್ರಿಯೆ ನೀಡಿರುತ್ತಾರೆ.

ಕೆಲವು ಕ್ರಿಕೆಟ್‌ ಅಭಿಮಾನಿಗಳು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಯಾವ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೋ ಆ ತಂಡದಲ್ಲಿ ಯಾರು ಈಗ ವಿಶ್ವಕಪ್‌‌ ಆಡುತ್ತಿದ್ದಾರೋ ಅವರ ಸಾಧನೆಗೆ ಮಾತ್ರ ಬೆಂಬಲ. ಮುಂಬೈ ಇಂಡಿಯನ್ಸ್‌ ತಂಡವನ್ನು ಬೆಂಬಲಿಸುವ ಕೆಲವು ಅಭಿಮಾನಿಗಳು ರೋಹಿತ್‌‌ ಶರ್ಮಾ ಅವರ ದಾಖಲೆಗೆ ಸಂಭ್ರಮಿಸುತ್ತಾರೆ. ಬೇರೆಯವರ ಸ್ಟೇಟಸ್‌ ಕಂಡಲ್ಲಿ ಬರೇ ಲೈಕ್‌ ಒತ್ತುತ್ತಾರೆ. ನೋ… ಕಾಮೆಂಟ್ಸ್‌. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೆಲವು ಅಭಿಮಾನಿಗಳು ರೋಹಿತ್‌‌ ಶರ್ಮಾ ಅವರ ಸಾಧನೆಯನ್ನು ಲೈಕ್‌ನಲ್ಲೇ ಮುಗಿಸುತ್ತಾರೆ. ಆರ್‌ಸಿಬಿ ಫ್ಯಾನ್‌ಗಳಿಗೆ ನಿನ್ನೆಯ ದಿನ ಸುಗ್ಗಿ. ವಿರಾಟ್‌ ಕೊಹ್ಲಿ ಅವರು ಸಚಿನ್‌ ದಾಖಲೆ ಮುರಿದದ್ದು ಐಪಿಎಲ್‌ ಟ್ರೋಫಿ ಗೆದ್ದಷ್ಟೇ ಸಂಭ್ರಮ. ಇದೆಲ್ಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲ ಯಾವುದೇ ಜನಪ್ರಿಯ ಕ್ರೀಡೆಯಲ್ಲಿ ಇದ್ದೇ ಇರುತ್ತದೆ.

ಆದರೆ ಕ್ರಿಕೆಟ್‌ ಅಭಿಮಾನಿಗಳು ವೈಯಕ್ತಿಕ ದ್ವೇಷ, ಸಮುದಾಯ ಮತ್ತು ಜಾತಿಯ ನಿಂದನೆಗಳನ್ನು ಮಾಡಬಾರದು. ಮುಂಬೈ ಇಂಡಿಯನ್ಸ್‌ ಅಭಿಮಾನಿಗಳ ವ್ಯಾಟ್ಟಪ್‌ ಗುಂಪಿಗೆ ಹೇಗೋ ಸೇರಿಕೊಂಡ ಆರ್‌ಸಿಬಿ ಗುಂಪಿನ ಸದಸ್ಯರು ಅಲ್ಲಿಯ  ಪ್ರತಿಕ್ರಿಯೆ ನೀಡಲಾಗದೆ ಆರ್‌ಸಿಬಿ ಗುಂಪಿನಲ್ಲಿ ಬಂದು ಆಕ್ರೋಶ ವ್ಯಕ್ತಪಡಿಸುವುದಿದೆ. ದೇಶ, ಭಾಷೆ ಇವುಗಳ ನಿಂದನೆಯೂ ನಡೆಯುತ್ತದೆ.

ತುಲನೆ ಮಾಡುವುದು ಸೂಕ್ತವಲ್ಲ!

ಸಚಿನ್‌ ತೆಂಡೂಲ್ಕರ್‌ ಮೊದಲ ಶತಕ ಸಿಡಿಸಿದ್ದು 1994 ಸೆಪ್ಟೆಂಬರ್‌ 9 ರಂದು. ಮತ್ತು 49ನೇ ಶತಕ ಸಿಡಿಸಿದ್ದು 2012 ಮಾರ್ಚ್‌ 16ರಂದು. ವಿರಾಟ್‌ ಕೊಹ್ಲಿ ಮೊದಲ ಏಕದಿನ ಶತಕ ಗಳಿಸಿದ್ದು 2009 ಡಿಸೆಂಬರ್‌ 24 ರಂದು, ಮತ್ತು 49ನೇ ಶತಕ ಗಳಿಸಿದ್ದು 2023ರಲ್ಲಿ ಅಂದರೆ ಸಚಿನ್‌ಗೆ 49ನೇ ಶತಕ ಗಳಿಸಲು 18 ವರ್ಷ ತಗಲಿತು. ವಿರಾಟ್‌ ಕೊಹ್ಲಿಗೆ 14 ವರ್ಷ ತಗಲಿತು. ಆಗಿನ ಬೌಲರ್‌ ಹೇಗಿದ್ದರು, ಈಗಿನ ಬೌಲರ್‌ ಹೇಗಿದ್ದಾರೆ? ಅಂದಿನ ಪಿಚ್‌, ಈಗಿನ ಪಿಚ್‌ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ.

ಸಚಿನ್‌ ಅವರು ಕೀನ್ಯಾ, ಜಿಂಬಾಬ್ವೆ ಹಾಗೂ ನಮೀಬಿಯಾ ವಿರುದ್ಧವೂ ಶತಕ ಗಳಿಸಿದ್ದರು. ಅವು ಕೂಡ ದಾಖಲೆಗೆ ಸೇರಿವೆ. ಹಾಗಂತ ಅವುಗಳೆಲ್ಲ ದುರ್ಬಲ ತಂಡಗಳು ಎಂದು ಹೇಳುವಂತಿಲ್ಲ. ಅನನುಭವಿ ತಂಡಗಳು. “ಸಚಿನ್‌ ಮೊದಲ ಶತಕ ಸಿಡಿಸಿದಾಗ ಕೊಹ್ಲಿಗೆ ಇನ್ನೂ ಆರು ವರ್ಷ. ಆಮೇಲೆ ಕ್ರಿಕೆಟ್‌ಗೆ ಬಂದು ತನಗೆ ಮಾದರಿ ಎನಿಸಿದ್ದ ಕ್ರಿಕೆಟ್‌ ದೇವರ ದಾಖಲೆಯನ್ನು ಸರಿಗಟ್ಟಬೇಕೆಂದರೆ ಅದು ಸುಲಭದ ಸಾಧನೆಯಲ್ಲ,” ಎನ್ನುವ ಅಭಿಮಾನಿಯ ಮಾತನ್ನು ಮೆಚ್ಚಲೇ ಬೇಕು.

ಹೀಗೆ ಕ್ರಿಕೆಟ್‌ ಮಾತ್ರವಲ್ಲ ಜಗತ್ತಿನ ಯಾವುದೇ ಕ್ರೀಡೆಯ ಲೀಗ್‌ ತೆಗೆದುಕೊಳ್ಳಿ ಅಲ್ಲಿ ಅಭಿಮಾನಿಗಳ ನಡುವೆ ವೈಮನಸ್ಸು ಇದ್ದೇ ಇರುತ್ತದೆ. ಜಗಳ ನಡೆಯುತ್ತದೆ. ವೈಷಮ್ಯ ಬೆಳೆಯುತ್ತದೆ. ಅದು ಬದುಕಿನ ಇತರ ಸಂಬಂಧಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ಕ್ರಿಕೆಟ್‌ ಆಟಗಾರರ ಬಗ್ಗೆ ಅಭಿಮಾನ ಇರಲೇಬೇಕು. ಆದರೆ ನಿಮ್ಮ ಆತ್ಮೀಯ ಗೆಳೆಯರನ್ನು ದ್ವೇಷಿಸುವ, ದೂಷಿಸುವಷ್ಟು ಹುಚ್ಚು ಅಭಿಮಾನ ಬೇಕಾಗಿಲ್ಲ. ಕ್ರೀಡೆಯ ಮೂಲಕ ಸಂಬಂಧ ಬೆಸೆಯಬೇಕೇ ಹೊರತು ಬಿರುಕಾಗಬಾರದು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.