ಪ್ರವೀಣ್ ಯಕ್ಷಿಮಠ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಏಖಮುಖವಾಗಿ ನಡೆದು, ಭಾರತ ಇನ್ನಿಂಗ್ಸ್ ಹಾಗೂ 272 ರನ್ ಜಯ ಕಂಡಿದೆ. ಟೆಸ್ಟ್ ಕ್ರಿಕೆಟ್ ಗೆ ಟಿ20 ಯ ಮೆರುಗು ನೀಡಿದ ಆಟಗಾರ ವೀರೇಂದ್ರ ಸೆಹ್ವಾಗ್. ಭಾರತ ಕಂಡ ಅದ್ಭುತ ಕ್ರಿಕೆಟಿಗನ ಬಗ್ಗೆ
ಯುವ ಪತ್ರಕರ್ತ ಪ್ರವೀಣ್ ಯಕ್ಷಿಮಠ ಅವರ ಪುಟ್ಟ ಬರೆಹ.
ತಾನು ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶೋಯೆಬ್ ಅಕ್ತರ್ ಬಾಲ್ ಗೆ ಎಲ್ಬಿಡಬ್ಲ್ಯೂ ಆಗಿ ಹೊರಹೋಗುವಾಗ ಆತನ ಸ್ಕೋರ್ ಆಗಿತ್ತು ಕೇವಲ ಒಂದು ರನ್!! ಅಲ್ಲಿಗೆ ಆತನ ಕ್ರಿಕೆಟ್ ಕೆರಿಯರ್ ಮುಗಿದು ಹೋಯಿತು ಎಂದಿತು ಕ್ರಿಕೇಟ್ ಜಗತ್ತು!! ವಾಪಾಸು ಭಾರತೀಯ ತಂಡದ ಜೆರ್ಸಿ ಧರಿಸಲು ಆತ ಕಾದಿದ್ದು ಭರೋಬ್ಬರಿ ಇಪ್ಪತ್ತು ತಿಂಗಳು!! ಮುಂದೊಂದು ದಿನ ಆತ ಕೇವಲ ಅರವತ್ತೊಂಬತ್ತು ಬಾಲುಗಳಲ್ಲಿ ಭರ್ತಿ ನೂರು ರನ್ ಸಿಡಿಸಿ ನೂಜಿಲ್ಯಾಂಡನ ಬೌಲಿಂಗ್ ದಾಳಿಯನ್ನು ಧೂಳೆಬ್ಬಿಸಿದಾಗ ವಿಶ್ವ ಕ್ರಿಕೇಟ್ ಆತನೆಡೆಗೆ ನಿಬ್ಬೆರಗಾಗಿ ನೋಡಿತ್ತು!!ಏಕೆಂದರೆ ಆತ ಸೇಮ್ ಟು ಸೇಮ್ ಸಚಿನ್ ಅವರಂತೆಯೇ ಬ್ಯಾಟು ಬೀಸುತ್ತಿದ್ದ!!! ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ತಂಡದ ಆರಂಭಿಕನಾಗಿ ಕೆಲ ವರುಷಗಳ ಕಾಲ ಕ್ರಿಕೇಟ್ ಲೋಕದಲ್ಲಿ ಮಿಂಚಿನ ಸಂಚಾರ ಮಾಡಿದ ಆತನ ಹೆಸರು ವೀರೇಂದ್ರ ಸೆಹ್ವಾಗ್ !! ಹೌದು ವೀರೂ ಬ್ಯಾಟು ಬೀಸುವುದು ಬಿಟ್ಟು ಕೆಲ ವರುಷಗಳಾದವು,
ಆದರೂ ಇವತ್ತಿಗೂ ಅವರು ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೃದಯ ಸಾಮ್ರಾಟ!! ಬಾಲು ಓಡಿ ಬರುವುದೇ ದಂಡಿಸಲಿಕ್ಕಾಗಿ ಎಂದು ಯದ್ವಾತದ್ವಾ ಭಾರಿಸಿ ಬೌಂಡರಿಗಟ್ಟುತ್ತಿದ್ದ ಸೆಹ್ವಾಗ್ ಕ್ರೀಸಿನಲ್ಲಿದ್ದಷ್ಟೂ ಹೊತ್ತು ಘಟಾನುಘಟಿ ಬೌಲರ್ ಗಳು ಬೆವರಿ ನಡಗುತ್ತಿದ್ದರು !!
ಇವತ್ತಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನ ಟಾಪ್ ಟೆನ್ ಅತಿ ವೇಗದ ದ್ವಿಶತಕದಲ್ಲಿ ನಾಲ್ಕು ಸೆಹ್ವಾಗ್ ಅವರದ್ದು. ವೇಗದ ಟಾಪ್ ಐದು ತ್ರಿಶತಕಗಳಲ್ಲಿ ಎರಡು ಸೆಹ್ವಾಗ್ ಅವರದ್ದು. ,ಟೆಸ್ಟ್ ಚರಿತ್ರೆಯಲ್ಲಿ ದಿನವೊಂದರಲ್ಲೆ ಇನ್ನೂರ ಎಂಬತ್ತನಾಲ್ಕರಷ್ಟು ರನ್ನುಗಳನ್ನು ಹೊಡೆದು ರಾಶಿಹಾಕಬೇಕಾದರೆ ಆತನ ಬ್ಯಾಟಿಂಗ್ ವೈಭವ ಹೇಗಿತ್ತೆಂಬುದನ್ನು ಊಹಿಸಿ !! ವೆಸ್ಟ್ ಇಂಡೀಸ್ ಕ್ರಿಕೆಟ್ ನ ದೈತ್ಯ ಬ್ಯಾಟ್ಸ್ ಮ್ಯಾನ್ ಡೆಸ್ಮಂಡ್ ಹೇಯ್ನ್ಸ್ ಕೂಡ ವೀರೂ ಅಭಿಮಾನಿಯಾಗಿ ಆತನ ಬ್ಯಾಟಿಂಗ್ ನೋಡುದನ್ನು ಬಲು ಇಷ್ಟಪಡುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ! ಪ್ರಪಂಚದ ಅದ್ಯಾವುದೇ ಮೂಲೆಯ ಗ್ರೌಂಡಿನಲ್ಲೂ ಎಂತಹದೇ ಬೌಲಿಂಗಿಗೂ ಕ್ಯಾರೇ ಎನ್ನದೆ ನುಗ್ಗಿ ಭಾರಿಸುತ್ತಿದ್ದ ಪ್ರಪಂಚದ ಏಕೈಕ ದಾಂಡಿಗನಾಗಿ ಗುರುತಿಸಲ್ಪಡುವ ಸೆಹ್ವಾಗ್ ತಾನು ತ್ರಿಶತಕ ಹೊಡೆದ ಬ್ಯಾಟನ್ನು ಹರಾಜಿಗಿಟ್ಟು ಸುನಾಮಿ ಸಂತ್ರಸ್ತರಿಗೆ ನೆರವಾದ ಹೃದಯವಂತ ಕೂಡ, ಅವರ ಫೌಂಡೆಷನ್ ಗಳು ಇಂದಿಗೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ. ಆದುದರಿಂದಲೇ ನಿವ್ರತ್ತಿಯ ನಂತರವೂ ಅವರು ಜಗತ್ತಿನ ನೈಜ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹೊಳೆಯುವ ನಕ್ಷತ್ರವಾಗಿ ಕಂಗೊಳಿಸುತ್ತಾರೆ .ಅವರ ಆಟ ಮತ್ತೆಮತ್ತೆ ನೆನಪಾಗಿ ಕಾಡುತ್ತದೆ.