ಒಂದೆಡೆ ಬೋರು ಹಿಡಿಸಿದ ಟೆಸ್ಟ್ ಕ್ರಿಕೆಟ್, ಇನ್ನೊಂದೆಡೆ ಕುತೂಹಲದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್, ದೇಶಕ್ಕಾಗಿ ಕೀರ್ತಿ ತರಲು ಸೆಣಸುತ್ತಿದ್ದಾರೆ ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಸಾಧಕರು, ಮತ್ತೊಂದೆಡೆ ಸುಲ್ತಾನ್ ಅಜ್ಲಾನ್ ಶಾ ಹಾಕಿ ಚಾಂಪಿಯನ್ಷಿಪ್, ಅರ್ಜೆಂಟೀನಾದಲ್ಲಿ ಕಿರಿಯರ ಒಲಿಂಪಿಕ್ಸ್, ಜತೆಯಲ್ಲಿ ದಸರಾ ಕ್ರೀಡಾಕೂಟ, ಇವೆಲ್ಲವನ್ನೂ ನೋಡಿಕೊಂಡು ಮತ್ತೊಂದು ಲೀಗ್ ನೋಡುವ ಅವಕಾಶ. ಅದು ಬೇರೆ ಯಾವುದೂ ಅಲ್ಲ, ಬಾಲ್ಯದ ಆಟ. . . ಆದರೆ ಮಕ್ಕಳಾಟವಲ್ಲ, ಹಳ್ಳಿಯ ಆಟ.. .ಆದರೆ ಬರೇ ಹಳ್ಳಿಗೆ ಸೀಮಿತವಾಗಿಲ್ಲ.. . ಜಗತ್ತನ್ನೇ ಬಡಿದೆಬ್ಬಿಸುವ ಪ್ರೊ ಕಬಡ್ಡಿ ಲೀಗ್. ಇಂದಿನಿಂದ ಚೆನ್ನೈನಲ್ಲಿ ಆರಂಭ.
ಲೆ ಪಂಗಾ..ಇಂದಿನಿಂದ ನೋಡಿ ಕಬಡ್ಡಿ!
ಸ್ಪೋರ್ಟ್ಸ್ ಮೇಲ್ ವರದಿ
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ತಮಿಳು ತಲೈವಾಸ್ ಸೆಣಸಲಿವೆ. ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ೧೨ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಬೆಂಗಾಲ್ ವಾರಿಯರ್ಸ್ನ ಸುರ್ಜಿತ್ ಸಿಂಗ್, ದಬಾಂಗ್ ದಿಲ್ಲಿಯ ಜೋಗಿಂದರ್ ಸಿಂಗ್ ನರ್ವಾಲ್, ಗುಜರಾತ್ ಫಾರ್ಚೂನ್ಜಯಂಟ್ಸ್ನ ಸುನಿಲ್ ಕುಮಾರ್, ಹರಿಯಾಣ ಸ್ಟೀಲರ್ಸ್ನ ಸುರೇಂದರ್ ನಾಡಾ, ಜೈಪುರ್ ಪಿಂಕ್ ಪ್ಯಾಂಥರ್ಸ್ನ ಅನೂಪ್ ಕುಮಾರ್, ಪಾಟ್ನಾ ಪೈರೇಟ್ಸ್ನ ಪ್ರದೀಪ್ ನರ್ವಾಲ್, ಪುಣೇರಿ ಪಲ್ಟಾನ್ಸ್ನ ಗಿರೀಶ್ ಎರ್ನಾಕ್, ತೆಲುಗು ಟೈಟಾನ್ಸ್ನ ವಿಶಾಲ್ ಭಾರದ್ವಾಜ್, ಯುಪಿ ಯೋಧಾಸ್ನ ರಿಶಾಂಕ್ ದೇವಾಡಿಗ, ಯು ಮುಂಬಾ ತಂಡದ ಧರ್ಮರಾಜ್ ಚೆಲ್ಲರಾತನ್, ತಮಿಳು ತಲೈವಾಸ್ನ ಅಜಯ್ ಠಾಕೂರ್ ಹಾಗೂ ಬೆಂಗಳೂರು ಬುಲ್ಸ್ನ ರೋಹಿತ್ ಕುಮಾರ್ ಅವರ ತಂಡ ಪ್ರಸಕ್ತ ಋತುವಿನ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕ್ರೀಡಾಪಟುಗಳ ಜತೆಯಲ್ಲಿ ನಟಿ ಶೃತಿ ಹಾಸನ್ ಹಾಗೂ ವಿಜಯ್ ಸೇತುಪತಿ ರಂಗು ನೀಡಲಿದ್ದಾರೆ. ೧೩ ವಾರಗಳ ಕಾಲ ನಡೆಯುವ ಚಾಂಪಿಯನ್ಷಿಪ್ನ ಪ್ಲೇ ಆಫ್ ಪಂದ್ಯಗಳು ಕೊಚ್ಚಿಯಲ್ಲಿ ನಡೆಯಲಿವೆ. ಜನವರಿ ೫ರಂದು ಮುಂಬೈಯಲ್ಲಿ ಫೈನಲ್ ಪಂದ್ಯ ನಡೆಯಲಿದೆ.