Friday, November 22, 2024

ಮೊಯ್ ಥಾಯ್ ಆಗರ, ನಮ್ಮ ಸೂರ್ಯ ಸಾಗರ

ಸೋಮಶೇಖರ್ ಪಡುಕರೆ, ಬೆಂಗಳೂರು

ವೈಲ್ಡ್ ಲೈಫ್ ಸಂಶೋಧನೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದಿದ್ದ ಹುಡುಗನೊಬ್ಬ ಸೂಕ್ತ ವೇದಿಕೆ ಸಿಗದೆ, ತನ್ನನ್ನು ರೇಗಿಸಿದವರ ವಿರುದ್ಧ ಸಿಡಿದೇಳು ಮೊಯ್ ಥಾಯ್ ಕಲಿತು, ಸಿಟ್ಟೆಲ್ಲ ತಣಿದ ನಂತರ ಸೇಡು ತೀರಿಸಿಕೊಳ್ಳುವ ಬದಲು ಅದರಲ್ಲೇ ವೃತ್ತಿಪರತೆಯನ್ನು ಕಂಡುಕೊಂಡು, ಅದರಲ್ಲೇ  (WBC muay thai) ರಾಷ್ಟ್ರೀಯ ಚಾಂಪಿಯನ್ ಆದ ಮೊದಲ ಕನ್ನಡಿಗ ಮತ್ತು ಅಂತಾರಾಷ್ಟ್ರೀಯ ಮ್ಯಾಕ್ಸ್ ಮೊಯ್ ಥಾಯ್ ಫೈಟ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವೃತ್ತಿಪರ ಫೈಟರ್ ಸೂರ್ಯ ಸಾಗರ್ ಅವರ ಬದುಕಿನ ಕತೆ ಚಿಕ್ಕದಾದರೂ ಸ್ಫೂರ್ತಿಯ ಸೆಲೆ.

ನಟ ಅರುಣ್ ಹಾಗೂ ಮೀರಾ ಸಾಗರ್ ಅವರ ಮಗ, ಹಾಡುಗಾರ್ತಿ ಅದಿತಿ ಸಾಗರ್ ಅವರ ಸಹೋದರ ಸೂರ್ಯ ಸಾಗರ್ ಓದಿದ್ದು ಪಿಯುಸಿ…ಆದರೆ ಕ್ರೀಡಾ ಅನುಭವದಲ್ಲಿ ಸ್ನಾತಕೋತ್ತರ ಪದವಿಯನ್ನೇ ಪಡೆದಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಮೊದಲ ಬಾರಿಗೆ WBC muay thai ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಯಿತು. ಕೇವಲ 2 ನಿಮಿಷಗಳಲ್ಲೇ ಎದುರಾಳಿಯನ್ನು ನೆಲಕ್ಕಚ್ಚುವಂತೆ ಮಾಡಿದ ಸೂರ್ಯ ಸಾಗರ್ ದೇಶದ ಮೊದಲ WBC muay thai ರಾಷ್ಟ್ರೀಯ ಚಾಂಪಿಯನ್ ಎನಿಸಿದರು. “ಈಗ ಎಷ್ಟು ವರ್ಷಗಳ ಕಾಲ ಈ ಬೆಲ್ಟ್ ನನ್ನದಾಗಿಸಿಕೊಳ್ಳಬೇಕೋ ಅಲ್ಲಿಯವರೆಗೆ ಹೋರಾಟ ಮುಂದುವರಿಯುತ್ತದೆ, ಜತೆಯಲ್ಲಿ ನನಗೆ ಮೊದಲ ಅಂತಾರಾಷ್ಟ್ರೀಯ ಮೊಯ್ ಥಾಯ್ ಚಾಂಪಿಯನ್ ಪಟ್ಟ ತಂದುಕೊಟ್ಟ ಥಾಯ್ಲೆಂಡ್ ನಲ್ಲಿ ವೃತ್ತಿಪರ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಫೈಟರ್ ಆಗುವುದೇ ನನ್ನ ಗುರಿ. ಈಗಾಗಲೇ ಈ ಕ್ರೀಡೆಯನ್ನು ಒಲಿಂಪಿಕ್ಸ್ ಕ್ರೀಡೆ ಎಂದು ಘೋಷಿಸಿದ್ದಾರೆ. ವೃತ್ತಿಪರ ಮತ್ತು ಅಮೆಚೂರ್ ಗೆ ವ್ಯತ್ಯಾಸವಿದೆ. ಅಮೆಚೂರ್ ನಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಾರೆ, ಆದರೆ ವೃತ್ತಿಪರತೆಯಲ್ಲಿ ಯಾವುದೇ ಸುರಕ್ಷಾ ಕ್ರಮ ಇಲ್ಲದೆ ಸ್ಪರ್ಧಿಸಬೇಕು.” ಎಂದಿದ್ದಾರೆ ಸೂರ್ಯ ಸಾಗರ್.

ಎಲ್ಲಿಯೂ ಫೈಟ್ ಮಾಡದೆ ಬರೇ ಸರ್ಟಿಫಿಕೇಟ್ ಗಳನ್ನು ಪಡೆದು ಕಾಸಿಗಾಗಿ ಬೆಂಗಳೂರಿನಲ್ಲಿ  ತರಬೇತಿ ನೀಡುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ 23ನೇ ವಯಸ್ಸಿನಲ್ಲಿ ಯಾವುದೇ ಸುರಕ್ಷಾ ಕ್ರಮವನ್ನು ಬಳಸದೆ ಫೈಟ್ ಮಾಡುತ್ತಿರುವ ಈ ಸಾಧಕ ನಡೆದು ಬಂದ ಹಾದಿ ಮಾತ್ರ ಅಚ್ಚರಿ. ಶಾಲೆಯಲ್ಲಿ ಓದುವಾಗ ತರ್ಲೆ ಹುಡುಗರು ಸೂರ್ಯನ ಮೇಲೆ ಎಗರಾಡುತತಿದ್ದರು. ಇವರಿಗೊಂದು ಪಾಠ ಕಲಿಸಬೇಕು ಎಂದರಿತು ಮೊಯ್ ಥಾಯ್ ಸೇರಿಕೊಂಡವ ಮತ್ತೆ ಗೆಳೆಯರ ಬಗ್ಗೆ ವೈರತ್ವವನ್ನೇ ಮರೆತು ಆ ಕ್ರೀಡೆಯಲ್ಲಿಯೇ ವೃತ್ತಿಪರತೆಯನ್ನು ಕಂಡುಕೊಂಡ. ಈಗ ದೇಶದ ಉದಯೋನ್ಮುಖ ಫೈಟರ್ ಗಳಲ್ಲಿ ಕನ್ನಡಿಗ ಸೂರ್ಯ ಕೂಡ ಒಬ್ಬರು.

ಮೊಯ್ ಥಾಯ್ ಜತೆಯಲ್ಲಿ ಕುಂಗ್ ಫೂವನ್ನೂ ಕಲಿತಿರುವ ಸೂರ್ಯ ಪಳಗಿದ್ದು ಮಾತ್ರ ರಿಂಗ್ ಫೈಟ್ ನಲ್ಲಿ. 2015ರಲ್ಲಿ ಭಾರತದ ಅಭಿಮನ್ಯು ಠಾಕೂರ್ ಥಾಯ್ಲೆಂಡ್ ನಲ್ಲಿ ನಡೆದ ಮ್ಯಾಕ್ಸ್ ಮೊಯ್ ಥಾಯ್ ಫೈಟ್ ನಲ್ಲಿ ಜಯ ಗಳಿಸುವಲ್ಲಿ ವಿಫಲರಾದರು. ಆದರೆ ಈ ಫೈಟ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಫೈಟರ್ ಎನಿಸಿದರು. ಆದರೆ 2019ರಲ್ಲಿ ಸೂರ್ಯ ಚಾಂಪಿಯನ್ ಫೈಟ್ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದರು. WBC muay thai ಭಾರತಕ್ಕೆ ಬಂದಿದ್ದು, ಇದೇ ಮೊದಲು. ಮೊದಲ ಫೈಟ್ ಕೂಡ ಬೆಂಗಳೂರಿನಲ್ಲೇ ನಡೆಯಿತು. ಮೊದಲ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದವರೂ ಕನ್ನಡಿಗರೇ…ಅದರಲ್ಲೂ ಆ ಕ್ರೀಡೆಯನ್ನು ಉಸಿರಾಗಿಸಿಕೊಂಡ ಸೂರ್ಯ ಸಾಗರ್ ಅವರಿಗೆ ಜಯ ದಕ್ಕಿರುವುದೇ ವಿಶೇಷ.

ರಾಜ್ಯ ಮಟ್ಟದ ಸ್ಪರ್ಧೆಯೊಂದರಲ್ಲಿ ಸೋಲನುಭವಿಸಿದ ನಂತರ ಮೈಸೂರಿನಲ್ಲಿ ಮೂರು ವರ್ಷ ತರಬೇತಿ ಪಡೆದ ಸೂರ್ಯ ಸಾಗರ್ ದಸಾರಾ ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಷ್ಟ್ರಮಟ್ಟದಲ್ಲೂ ಮೂರು ಬಾರಿ ಪ್ರಶಸ್ತಿ ಗೆದ್ದರು. ಐದು ಬಾರಿ ಥಾಯ್ಲೆಂಡ್ ನಲ್ಲಿ ವಿಶೇಷ ತರಬೇತಿ ಪಡೆದರು, ಈಗ ಸೂರ್ಯ ಅವರ ಪ್ರಭೆ ಎಲ್ಲೆಡೆ ಪಸರಿಸಿದೆ.

ಕನ್ನಡದ ಉತ್ತಮ ಸಿನಿಮಾ ನಟರುಗಳಲ್ಲಿ ಒಬ್ಬರಾಗಿರುವ ಅರುಣ್ ಸಾಗರ್ ಅವರ ಪುತ್ರ ಸೂರ್ಯ ಸಾಗರ್ ಅವರಿಗೆ ಇನ್ನೂ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ. ಅದಕ್ಕಾಗಿ ಲಾಕ್ ಡೌನ್ ಸಂದರ್ಭಗಳಲ್ಲೂ ಅವರು ತಮ್ಮ ಅಭ್ಯಾಸವನ್ನು ಬಿಟ್ಟಿಲ್ಲ. ಮೊಯ್ ಥಾಯ್ ಈಗ ಒಲಿಂಪಿಕ್ಸ್ ಕ್ರೀಡೆ ಆಗಿದೆ, ಟೋಕಿಯೋದಲ್ಲಿ ಒಲಿಂಪಿಕ್ಸ್ ಸಮಿತಿ ನಡೆಸಿದ ಸಭೆಯಲ್ಲಿ ಈ ಕ್ರೀಡೆಯನ್ನು ಅಧಿಕೃತವಾಗಿ ಒಲಿಂಪಿಕ್ಸ್ ಕ್ರೀಡೆ ಎಂದು ಘೋಷಿಸಿದ್ದಾರೆ. ಆದ್ದರಿಂದ ಈ ಕ್ರೀಡೆಯಲ್ಲಿ ಮತ್ತಷ್ಟು ಪ್ರತಿಭೆಗಳು ಹುಟ್ಟಿಕೊಳ್ಳಲಿ.ನಮ್ಮ  ಸೂರ್ಯನ ಕಿರಣ ಒಲಿಂಪಿಕ್ಸ್ ವರೆಗೂ ಹಬ್ಬಲಿ ಎಂಬುದೇ ಹಾರೈಕೆ.

Related Articles