ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ, ಆದರೂ ಈ ಸಲ ಕಪ್ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಕ್ರಿಕೆಟ್ ಜಗತ್ತಿನಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಹರಾಜಿನಲ್ಲಿ ತಂಡದ ಆಯ್ಕೆ ಸರಿ ಇಲ್ಲ ಎಂದು ಟೀಕಿಸುತ್ತಾರೆ, ಆಟಗಾರರನ್ನು ನಿಂದಿಸುತ್ತಾರೆ. ಕೋಚ್‌ಗಳನ್ನು ಗೇಲಿ ಮಾಡುತ್ತಾರೆ. ತಂಡವನ್ನೇ ಟ್ರೋಲ್ ಮಾಡಿ ಅಪಹಾಸ್ಯ ಮಾಡುತ್ತಾರೆ. ಆದರೂ ಪಂದ್ಯ ಆರಂಭವಾಯಿತೆಂದರೆ ಆರ್‌ಸೀಬೀ…ಆರ್‌ಸೀಬೀ..ಆರ್‌ಸೀಬೀ ಎಂದು ಜೀವಕೊಟ್ಟು ಕೂಗುತ್ತಾರೆ. ಪ್ರೋತ್ಸಾಹಿಸುತ್ತಾರೆ. Why hardcore fans supporting their sports teams even though they are losing the match?
ಮೊನ್ನೆ ಹರಾಜು ಪ್ರಕ್ರಿಯೆ ನಡೆಯುವಾಗ ಎದುರುಗಡೆ ಕುಳಿತ ಆರ್‌ಸಿಬಿಯ ಕಟ್ಟಾ ಅಭಿಮಾನಿ “ದರಿದ್ರಗಳು, ಆಯ್ಕೆ ಮಾಡಲೇ ಬರುತ್ತಿಲ್ಲ,” ಎಂದು ಬಾಯಲ್ಲಿ ಬೈಯುತ್ತಿದ್ದರೆ, “ವಾಟ್ಸಪ್‌ನಲ್ಲಿ..ಆಡ್ತಾನೆ ಆಡ್ತಾನೆ…. ಆರ್‌ಸಿಬಿಗೆ ಬಂದ್ರೆ ಎಲ್ಲವೂ ಸರಿಯಾಗುತ್ತದೆ,” ಎಂದು ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದ.
ಈ ಕ್ರೀಡಾಭಿಮಾನ ಎಂಬುದು ಒಂದು ವಿಚಿತ್ರ ಮನಸ್ಥಿತಿ. ಅಲ್ಲಿ ತಂಡ ಗೆಲ್ಲುತ್ತದೋ, ಸೋಲುತ್ತದೋ ಎಂಬ ಲೆಕ್ಕಾಚಾರ ಹಾಕಿ ಅವರು ಅಭಿಮಾನಿಯಾಗಿರುವುದಿಲ್ಲ. ಬದಲಾಗಿ ತನಗೆ ಖುಷಿ ಯಾವ ತಂಡದಿಂದ ಸಿಗುತ್ತದೋ ಆ ತಂಡದ ಅಭಿಮಾನಿಯಾಗಿರುತ್ತಾರೆ. ಕೆಲವರು ಉತ್ತಮ ಆಟವಾಡುವ ತಂಡದ ಅಭಿಮಾನಿಯಾಗಿದ್ದರೆ ಇನ್ನು ಕೆಲವರು ತಮಗೆ ಇಷ್ಟವಾದ ಆಟಗಾರರು ಇರುವ ತಂಡದ ಅಭಿಮಾನಿಯಾಗುತ್ತಾರೆ. ವಿರಾಟ್ ಕೊಹ್ಲಿ ಆರ್‌ಸಿಬಿಯ ಆಟಗಾರನಾದ ಕಾರಣ ಆರ್‌ಸಿಬಿಯ ಅಭಿಮಾನಿಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಹುಟ್ಟಿಕೊಂಡಿರುತ್ತಾರೆ. ಧೋನಿಯ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಾಗಿರುತ್ತಾರೆ. ಅವರು ಸೋಲು ಗೆಲುವುಗಳನ್ನು ಲೆಕ್ಕಿಸುವವರಲ್ಲ. ಇಲ್ಲಿ ರಾಜ್ಯ. ಭಾಷೆ, ಪ್ರಾಂತ್ಯ ಎಲ್ಲವೂ ಪ್ರಮುಖ ಪಾತ್ರವಹಿಸುತ್ತದೆ. “ನೀರೇ ಕೊಡ್ಲಿಲ್ಲ ಇನ್ನು ಮ್ಯಾಚ್ ಬಿಟ್ಟು ಕೊಡ್ತೀವಾ?” ಎಂದು ಆರ್‌ಸಿಬಿ ಅಭಿಮಾನಿಗಳು ಕಮೆಂಟ್ ಮಾಡಿರುವುದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದೇವೆ.
ಎಲ್ಲೋ ಆಡುತ್ತಿರುವ ಮೆಸ್ಸಿ, ನಮಗೆ ಸಂಬಂಧವೇ ಇಲ್ಲದ ರಿಯಲ್ ಮ್ಯಾಡ್ರಿಡ್, ಹತ್ತಿರದಿಂದ ಒಮ್ಮೆಯೂ ನೋಡದ ಸ್ಪೇನ್, ಬ್ರೆಜಿಲ್, ಫ್ರಾನ್ಸ್ ಹೀಗೆ ಫುಟ್ಬಾಲ್ ಆಟಗಾರರು ಹಾಗೂ ತಂಡಗಳ ಅಭಿಮಾನಿಗಳಿಗೆ ಭಾರತದಲ್ಲಿ ಕೊರತೆ ಇಲ್ಲ. ಸೋತಾಗ ನೊಂದು, ಗೆದ್ದಾಗ ಸಂಭ್ರಮಿಸುವ ಈ ಅಭಿಮಾನಿಗಳು ಆಟಗಾರರಿಗಿಂತಲೂ ದಾಖಲೆಗಳ ಬಗ್ಗೆ ಮಾತನಾಡಬಲ್ಲರು. ಕ್ರಿಕೆಟ್ ಆಟಗಾರರಿಗೆ ಗೊತ್ತಿರದ ಎಷ್ಟೋ ಅಂಕಿಸಂಖ್ಯೆಗಳು ಕ್ರಿಕೆಟ್ ಅಭಿಮಾನಿಗೆ ಗೊತ್ತಿರುತ್ತದೆ. ಜಗತ್ತಿನ ಪ್ರತಿಯೊಂದು ಕ್ರೀಡೆಯೂ ಯಶಸ್ಸು ಕಾಣುವುದು, ವೃತ್ತಿಪರವಾಗಿ ಬೆಳೆಯುವುದು ಅಭಿಮಾನಿಗಳನ್ನು ಆಧರಿಸಿಯೇ ಹೊರತು ಕ್ರೀಡೆಯನ್ನಲ್ಲ. ಫುಟ್ಬಾಲ್, ಬೇಸ್‌ಬಾಲ್, ಬಾಸ್ಕೆಟ್‌ಬಾಲ್ ಮತ್ತು ಕ್ರಿಕೆಟ್‌ಗೆ ಹೆಚ್ಚು ಅಭಿಮಾನಿಗಳು ಇದ್ದ ಕಾರಣ ಈ ಎರಡು ಕ್ರೀಡೆಗಳು ಹೆಚ್ಚು ಪ್ರಸಿದ್ಧಿ ಪಡೆದವು, ಹೆಚ್ಚು ಆದಾಯ ತಂದುಕೊಟ್ಟವು ಮತ್ತು ಹೆಚ್ಚು ಆಟಗಾರರನ್ನು ಶ್ರೀಮಂತಗೊಳಿಸಿದವು.
ಸೋಲು ಗೆಲುವಿನ ನಡುವೆ ಗೆಲ್ಲುವ ಅಭಿಮಾನ: ನಾನು ಆರ್‌ಸಿಬಿಯನ್ನೇ ಹೆಚ್ಚು ಉದಾಹರಣೆಯಾಗಿ ನೀಡುತ್ತೇನೆ. ಏಕೆಂದರೆ ನಮಗೆ ಸುಲಭವಾಗಿ ಅರ್ಥವಾಗುವ, ಹತ್ತಿರವಾಗಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡದ ಹೆಸರಿನಲ್ಲಿರುವ “ಬೆಂಗಳೂರು” ನಮ್ಮ ಹೃದಯವನ್ನು ಗೆಲ್ಲುತ್ತದೆ. ನಾವು ರಾಯಲ್ ಚಾಲೆಂಜರ್ಸ್ ಪದವನ್ನು ಬಿಟ್ಟುಕೊಡಬಹುದು. ಆದರೆ “ಬೆಂಗಳೂರನ್ನು” ಬಿಟ್ಟುಕೊಡುವುದಿಲ್ಲ. ತಂಡದಲ್ಲಿ ಕರ್ನಾಟಕದ ಆಟಗಾರರು ಇಲ್ಲದಿದ್ದರೂ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಆರ್‌ಸಿಬಿಯ ಕಡೆಗೇ ಹೆಚ್ಚು ವಾಲಿರುತ್ತದೆ. ಇಂಥ ಅಭಿಮಾನ ಹೇಗೆ ಹುಟ್ಟಿಕೊಳ್ಳುತ್ತದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಒಬ್ಬ ಕ್ರೀಡಾ ಅಭಿಮಾನಿ ಒಂದು ಕ್ರೀಡೆ ಅಥವಾ ಕ್ರೀಡಾಪಟುವಿನ ಅಭಿಮಾನಿ ಏಕೆ ಆಗುತ್ತಾನೇ? ಎಂಬ ಪ್ರಶ್ನೆಗೆ ನಾವು ಮೊದಲು ಉತ್ತರವನ್ನು ಕಂಡುಕೊಳ್ಳಬೇಕು. ಇದೊಂದು ಸಾಮಾಜಿ ಸಂಬಂಧ. ಇಬ್ಬರ ಪರಿಚಯ ಇರುವುದಿಲ್ಲ, ಭಾಷೆಯೂ ಗೊತ್ತಿರುವುದಿಲ್ಲ, ಆದರೂ “ಸ್ಕೋರ್ ಎಷ್ಟಾಯಿತು?” ಎಂದು ಕೇಳುತ್ತೇವೆ. ಇದು ಕ್ರೀಡೆಗಿರುವ ಶಕ್ತಿ. ಈ ಬಂಧವನ್ನು ಬೆಸೆಯುವುದು ಕ್ರೀಡೆ. ಅದು ಕ್ರಿಕೆಟೇ ಆಗಿರಬೇಕೆಂದಿಲ್ಲ.
ಭಾವನಾತ್ಮಕ ಸಂಬಂಧವು ಸೋಲು ಗೆಲುವನ್ನು ಮೀರಿದ್ದಾಗಿರುತ್ತದೆ. 17 ವರ್ಷಗಳಿಂದ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲ ಆದರೂ ಅದು ನಮ್ಮ ತಂಡ ಎಂದು, ಈ ಸಲ ಕಪ್ ನಮ್ದೇ ಎಂದು ಮತ್ತೆ ಅಂಗಣಕ್ಕೆ ಪ್ರವೇಶಿಸುವ, ಟೀವಿ ಮುಂದೆ ಕುಳಿತುಕೊಳ್ಳುವ ಅಭಿಮಾನವಿದೆಯಲ್ಲ, ಅದು ಭಾವನಾತ್ಮಕವಾದುದು. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೇಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಅಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರವೇ ನೋಡುತ್ತಿರಲಿ ಅವರ ಮನದಲ್ಲಿ “ಇದು ನನ್ನ ತಂಡ”, “ಇದು ನನ್ನ ಫೇವರಿಟ್ ಆಟಗಾರ ಆಡುತ್ತಿರುವ ತಂಡ”,” ಈ ತಂಡವೇ ಗೆಲ್ಲಬೇಕು” ಎಂದು ಅವರು ಆತ್ಮವಿಶ್ವಾಸದಿಂದ ವೀಕ್ಷಿಸುವದಲ್ಲದೆ ತನ್ನ ಆತ್ಮೀಯರಿಗೂ ತಂಡದ ಬಗ್ಗೆ ಮಾಹಿತಿ ನೀಡುತ್ತಾರೆ. ಇದು ಮುಂದೆ ಸಾಮಾಜಿಕ ಬೆಂಬಲವಾಗಿ ಬೆಳೆಯುತ್ತದೆ. ಇದು ಒಂದು ರೀತಿಯಲ್ಲಿ ಆರೋಗ್ಯಕರ ಸಮುದಾಯವನ್ನು ಸೃಷ್ಟಿಮಾಡುತ್ತದೆ.
ಕ್ರೀಡಾಭಿಮಾನದಿಂದಾಗುವ ಪ್ರಯೋಜನ: ಮನುಷ್ಯನ ಬದುಕು ನಿತ್ಯವೂ ಒಂದಲ್ಲಾ ಒಂದು ಜಂಜಾಟದಿಂದ ಕೂಡಿರುತ್ತದೆ. ಒತ್ತಡಗಳಿಗೆ ಸಿಲುಕಿರುತ್ತದೆ. ಒಂಟಿತನವೂ ಕಾಡುತ್ತಿರುತ್ತದೆ. ಆದರೆ ಕ್ರೀಡಾಭಿಮಾನಿಯಾಗಿದ್ದವನು ಈ ಎಲ್ಲ ಸಮಸ್ಯೆಗಳಿಂದ ದೂರ ಬರಲು ಸಾಧ್ಯ. ಕೆಲ ಹೊತ್ತಾದರೂ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಜಯದಲ್ಲಿ ಹೆಮ್ಮೆ ಪಟ್ಟು, ಕುತೂಹಲದ ಕ್ಷಣಗಳನ್ನು ಸಂಭ್ರಮಿಸಲು ಸಾಧ್ಯವಾಗುತ್ತದೆ. ಅಂತಿಮವಾಗಿ ಸೋತರೂ ಪಂದ್ಯದುದ್ದಕ್ಕೂ ಸಿಕ್ಕ ಕುತೂಹಲದ ಕ್ಷಣಗಳು, ಇತರ ಅಭಿಮಾನಿಗಳೊಂದಿಗೆ ಕಳೆದ ಕ್ಷಣ ಆತನ ನೋವನ್ನು, ಒಂಟಿತನವನ್ನು ದೂರ ಮಾಡಿರುತ್ತದೆ. ಕ್ರೀಡೆ ಮಾಡುವ ಮೊದಲ ಕೆಲಸ ಇದಾಗಿದೆ.
ಹಾಗಾದರೆ ಈ ಅಭಿಮಾನಿಗಳೆಲ್ಲ ಜಗಳ ಆಡುವುದು ಏತಕ್ಕೆ?: ಎಷ್ಟೋ ಪಂದ್ಯಗಳು ನಡೆಯುವಾಗ ಅಭಿಮಾನಿಗಳು ಮಾಡುವ ಗಲಾಟೆಯಿಂದಾಗಿ ಪಂದ್ಯಕ್ಕೆ ತಡೆಯಾದ ಉದಾಹರಣೆಗಳು ಸಾಕಷ್ಟಿವೆ. ಅತಿಯಾದ ಆವೇಶ, ಆಕ್ರೋಶಗಳು ಇಂಥ ಘಟನೆಗಳಿಗೆ ಕಾರಣವಾಗುತ್ತವೆ. ಅಭಿಮಾನಿಗಳು ಒತ್ತಡಕ್ಕೆ ಸಿಲುಕಿದಾಗ, ನಿರಾಸೆಗೊಳಗಾಗಿ ಖಿನ್ನತೆಗೆ ಒಳಗಾಗುವುದೂ ಇದೆ. ಈ ಭಾವನೆಗಳು ಪಂದ್ಯ ನೋಡಿ ಹೊರಕ್ಕೆ ಬಂದಾಗಲೂ ಮುಂದುವರಿದರೆ ಅದು ಜಗಳಕ್ಕೆ, ದ್ವೇಷಕ್ಕೆ ಕಾರಣವಾಗುತ್ತದೆ. ಮನಸ್ಸನ್ನು ಉದ್ವಿಗ್ನತೆಗೆ ಅನುವು ಮಾಡಿಕೊಡದಿದ್ದರೆ ಅಭಿಮಾನಿಗಳ ನಡುವೆ ವೈಷಮ್ಯ ಹುಟ್ಟುವುದಿಲ್ಲ. ಸೋಲು ಗೆಲುವು ಆಟದಲ್ಲಿ ಇದ್ದದ್ದೇ ಎಂದು ಮುಂದೆ ಸಾಗಿದರೆ ಅದು ಆರೋಗ್ಯಕರ.
ಸೋಲನ್ನು ಮನಸ್ಸಿಗೆ ಹಾಕಿಕೊಂಡು ಅದನ್ನು ಮರೆಯಲು ದುಶ್ಚಟಗಳಿಗೆ ದಾಸನಾಗುವುದು, ಬೆಟ್ಟಿಂಗ್ ಮೊದಲಾದ ದುಶ್ಚಟಗಳಲ್ಲಿ ತೊಡಗಿಸಿಕೊಳ್ಳುವ ಅಭಿಮಾನಿಗಳು ಕ್ರೀಡೆಗೆ ಅಪಾಯಕಾರಿ. ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಒಂದಾಗಿ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸುತ್ತಿದ್ದ ಅಭಿಮಾನಿಗಳು ಇನ್ನು ತಂಡವಾಗಿ ಬೇರಾಗುತ್ತಾರೆ. ಇಲ್ಲಿ ವೈಯಕ್ತಿಕ ದ್ವೇಷವನ್ನು ತೋರ್ಪಡಿಸದೆ, ಜಾತಿ, ಮತ, ಕುಲಗಳನ್ನು ಆಟಕ್ಕೆ ತಂದು ಮನಸ್ಸಿಗೆ ನೋವು ಮಾಡಿಕೊಳ್ಳದೆ ಕ್ರೀಡಾ ಮನೋಭಾವದಿಂದ ಪಂದ್ಯಗಳನ್ನು ವೀಕ್ಷಿಸಿ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಾದ ಅಗತ್ಯವಿದೆ. ಏಕೆಂದರೆ ನಿಮ್ಮ ನೋವುಗಳಿಗೆ, ದ್ವೇಷಗಳಿಗೆ ಯಾವುದೇ ತಂಡ ಅಥವಾ ಆಟಗಾರ ಬಂದು ಸಾಂತ್ವನ ಹೇಳುವುದಿಲ್ಲ. ನಿಮ್ಮ ನೋವಿಗೆ ನೀವೇ ಮುಲಾಮು ಹಚ್ಚಿಕೊಳ್ಳಬೇಕು.