Friday, October 18, 2024

ಸೂರ್ಯ ಕುಮಾರ್‌ ಯಾದವ್‌ ಪತ್ರಿಕಾಗೋಷ್ಠಿಗೆ ಬಂದದ್ದು ಇಬ್ಬರೇ ಪತ್ರಕರ್ತರು ಕಾರಣ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಮುಂಚಿತವಾಗಿ ನಡೆದ ಸೂರ್ಯ ಕುಮಾರ್‌ ಯಾದವ್‌ ಪತ್ರಿಕೋಷ್ಠಿಯಲ್ಲಿ ಎರಡು ಚಾನೆಲ್‌ಗಳ ಪತ್ರಕರ್ತರು ಮಾತ್ರ ಹಾಜರಾಗಿದ್ದರು ಎಂಬುದು ಇಂದು ಕ್ರೀಡಾ ವಿಭಾಗದಲ್ಲಿ ಕಂಡು ಬರುತ್ತಿರುವ ಪ್ರಮುಖ ಸುದ್ದಿ. Why only two reporters showed up for Surya Kumar Yadav press conference ahead of T20 match against Australia at Visakhapatnam?

ನಿಜವಾಗಿಯೂ ಅಚ್ಚರಿಯನ್ನುಂಟು ಮಾಡುವಂಥದ್ದು. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಎಂದಾಕ್ಷಣ ಮಾಧ್ಯಮಗಳು ಮುಗಿಬೀಳುತ್ತವೆ. ಆಗ ಕ್ರಿಕೆಟ್‌ ಬಗ್ಗೆ ಬರೆಯದವರೂ ವರದಿ ಮಾಡುವ ಆಸಕ್ತಿ ತೋರಿಸುತ್ತಾರೆ. ಕೆಲವು ಪತ್ರಿಕೆಗಳಲ್ಲಿ ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆದರೆ ಸ್ಪೋರ್ಟ್ಸ್‌ ಡೆಸ್ಕ್‌ನಲ್ಲಿ ಕೆಲಸ ಮಾಡುವವರ ಬದಲಿಗೆ ಕ್ರಿಕೆಟ್‌ ಬಗ್ಗೆ ಹೆಚ್ಚು ತೆವಲು ಇರುವ ನ್ಯೂಸ್‌ ಎಡಿಟರ್ಸ್‌ ಅಥವಾ ಮುಖ್ಯ ವರದಿಗಾರರು ಮೀಡಿಯಾ ಬಾಕ್ಸಿಗೆ ಬರುವುದಿದೆ. ಕಳೆದ ಎರಡು ತಿಂಗಳಿಂದ ಕ್ರೀಡಾ ಪತ್ರಕರ್ತರು ವಿಶ್ವಕಪ್‌ ಪಂದ್ಯಗಳ ವರದಿ ಮಾಡಿರುತ್ತಾರೆ. ವಿಶ್ವಕಪ್‌ನ ಪಂದ್ಯಗಳು ಮಾತ್ರವಲ್ಲ, ಆಟಗಾರರು ಅಭ್ಯಾಸ ಮಾಡುತ್ತಿರುವ ಬಗ್ಗೆಯೂ ವರದಿ ಮಾಡಿದ್ದರು. ಈಗ ವಿಶ್ವಕಪ್‌‌ ಫೈನಲ್‌‌ ಪಂದ್ಯ ಮುಗಿದು ಭಾರತೀಯರಿಗೆ ನಿರಾಸೆಯಾಗಿದೆ. ಫೈನಲ್‌ನಲ್ಲಿ ಭಾರತ ಸೋತಿದ್ದು ಭಾರತದ ಕ್ರೀಡಾ ಪತ್ರಕರ್ತರ ಹೆಡ್ಡಿಂಗ್‌ಗಳೆಲ್ಲ ತಲೆಕೆಳಗಾಯಿತು. ಕ್ಯಾಚಿ ಹೆಡ್‌ಲೈನ್‌ಗಳ ಬದಲಿಗೆ, ಕಾಮನ್‌  ಹೆಡ್‌ಲೈನ್‌ “ಹಾರ್ಟ್‌ ಬ್ರೇಕ್‌” ಹುಟ್ಟಿಕೊಂಡಿತು.

ಈ ರೀತಿ ವಿಶ್ವಕಪ್‌ ಮುಗಿದ ಮರುದಿನವೇ ಹುಡುಗರನ್ನೆಲ್ಲ ಸೇರಿಸಿ ಟಿ20 ಆಡಿಸಿದರೆ ಯಾರಿಗೆ ತಾನೇ ಆಸಕ್ತಿ ಬರುತ್ತದೆ. ಪಂದ್ಯದ ದಿನ ಹೋದರಾಯಿತು, ಬಿಡಿ ಎಂದು ಎಲ್ಲರೂ ಮಾತಾಡಿಕೊಂಡಿರುತ್ತಾರೆ. ಇನ್ನು ಕತೆ ಬರೆಯಲು ಪತ್ರಿಕಾಗೋಷ್ಠಿಗೇ ಹೋಗಬೇಕಾಗಿಲ್ಲ. ಕ್ಲಬ್‌ಹೌಸ್‌ನಲ್ಲೂ ಕುಳಿತುಕೊಂಡು ಸ್ಟೋರಿ ಕಟ್ಟುವವರಿದ್ದಾರೆ. ವಿಶ್ವಕಪ್‌ ಮುಗಿದ ಮರುವಿನ ಟಿ20 ಪಂದ್ಯವಾಡುವುದೆಂದರೆ ಜಾತ್ರೆಯ ಮುಗಿದು ಎರಡು ದಿನಗಳ ಬಳಿಕ ದೇವಸ್ಥಾನಕ್ಕೆ ಹೋದಂತೆ. ಅಲ್ಲಿ ಕುತೂಹಲವೇ ಇರುವುದಿಲ್ಲ. ಕ್ರಿಕೆಟ್‌ ಪತ್ರಕರ್ತರಿಗೂ ಹಾಗೆಯೇ ಆಗಿದೆ.

ಅಲ್ಲಿ ಹಾಜರಿದ್ದಿದ್ದು ಪಿಟಿಐ ಹಾಗೂ ಎಎನ್‌ಐ ಇವು ಏಜೆನ್ಸಿಗಳು. ಇವುಗಳು ಪಾಲ್ಗೊಂಡಿಲ್ಲವೆಂದರೆ ಸುದ್ದಿಯನ್ನು ಕೊಡುವುದಾದರೂ ಯಾರು. ಪಿಟಿಐ ದೇಶದ ಪ್ರಮುಖ ನ್ಯೂಸ್‌ ಏಜೆನ್ಸಿ. ಅದೇ ರೀತಿ ಎಎನ್‌ಐ ಕೂಡ ಹೌದು. ದೇಶದ ಯಾವುದೇ ಮೂಲೆಯಲ್ಲಿರುವ ಪತ್ರಕರ್ತರಿಗೆ ಈ ಪಿಟಿಐ ಮೂಲಕ ಸುದ್ದಿ ಸಿಕ್ಕಿಯೇ ಸಿಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಪತ್ರಿಕಾ ಕಚೇರಿಗಳಲ್ಲಿ ಪಿಟಿಐ ಸದಸ್ಯತ್ವ ಹೊಂದಿರುತ್ತಾರೆ. ಹೆಚ್ಚಿನ ಪತ್ರಕರ್ತರು ಈ ಕಾರಣಕ್ಕಾಗಿಯೂ ಆ ದಿನದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಲ್ಲ. ಮಧ್ಯಾಹ್ನ ವಿಶ್ವಕಪ್‌ವೆಂಬ ಭೂರೀ ಭೋಜನವನ್ನುಂಡು ಸಂಜೆ ಮತ್ತೆ ಟಿ20 ಎಂಬ ಔತಣ ಕೂಟಕ್ಕೆ ಬನ್ನಿ ಎಂದರೆ ಆಸಕ್ತಿ ಇರುವುದಾದರೂ ಹೇಗೆ?

Related Articles