Thursday, November 21, 2024

ಕಪಿಲ್‌ ದೇವ್‌ ಮಾತು ಕ್ರೀಡಾ ಸ್ಫೂರ್ತಿಯಿಂದ ಕೂಡಿಲ್ಲ!

ಹೊಸದಿಲ್ಲಿ: ಭಾರತದ ಈಗಿನ ತಂಡದ ಆಟಗಾರರಿಗೆ ನನ್ನ ನೆರವು ಬೇಕಾಗಿಲ್ಲ. ಅವರು ನನ್ನಲ್ಲಿ ಯಾವುದೇ ರೀತಿಯ ಸಲಹೆ ಕೇಳಲು ಬಂದಿಲ್ಲ. ಇದರಿಂದಾಗಿ ತಂಡದಿಂದ ದೂರ ಉಳಿದಿರುವೆ ಎಂದು 1983ರಲ್ಲಿ ವಿಶ್ವಕಪ್‌ ಗೆದ್ದ ತಂಡದ ನಾಯಕ ಕಪಿಲ್‌ ದೇವ್‌ ಹೇಳಿದ್ದಾರೆ. ಆದರೆ ಕಪಿಲ್‌ ಅವರ ಈ ರೀತಿಯ ಹೇಳಿಕೆ ಕ್ರೀಡಾಸ್ಫೂರ್ತಿಯಿಂದ ಕೂಡಿದ್ದಲ್ಲ. ತಂಡದ ಆಟಗಾರರು ಯಾಕೆ ಕೇಳಬೇಕು? ಇವರೇ ಕೊಡಬಹುದಲ್ಲ? Why should Indian players ask for advice from Kapil Dev?

ಕಪಿಲ್‌ ದೇವ್‌ ವಿಶ್ವಕಪ್‌ ಗೆದ್ದ ತಂಡದ ನಾಯಕ ನಿಜ. ಆದರೆ ತಂಡದ ಆಟಗಾರರು ತನ್ನಲ್ಲಿ ಬಂದು ಸಹಾಯ ಕೇಳಬೇಕೆಂದು ಬಯಸುವುದು ಸರಿಯಲ್ಲ. ಅವರಿಗೆ ತಂಡದ ಬಗ್ಗೆ ಒಳ್ಳೆ ಅಭಿಪ್ರಾಯವಿದ್ದರೆ, ಸಲಹೆ ನೀಡಬೇಕೆಂಬ ಮನಸ್ಸಿದ್ದರೆ ಪಂದ್ಯ ನಡೆಯುತ್ತಿರುವ ವಾಂಖೆಡೆ ಕ್ರೀಡಾಂಗಣಕ್ಕೆ ಹೋಗಿ ಆಟಗಾರರನ್ನು ಮಾತನಾಡಿಸಿ ಬರಬಹುದು. ಸಚಿನ್‌ ತೆಂಡೂಲ್ಕರ್‌ ಆ ಕೆಲಸವನ್ನು ಹೆಚ್ಚಾಗಿ ಮಾಡುತ್ತಾರೆ.

“ತಂಡಲ್ಲಿ ಈಗಿರುವ ಆಟಗಾರರು ಬಹಳ ಸ್ಮಾರ್ಟ್‌ ಆಗಿದ್ದಾರೆ, ಅವರಿಗೆ ನಮ್ಮ ಸಲಹೆ ಬೇಕಾಗಿಲ್ಲ,” ಎಂದು ಹೇಳುವ ಕಪಿಲ್‌ ದೇವ್‌ ಈ ಹಂತದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸೂಕ್ತವಲ್ಲ. ಭಾರತ ತಂಡಕ್ಕೆ ತರಬೇತಿ ನೀಡಲು ವೃತ್ತಿಪರ ತರಬೇತುದಾರರಿದ್ದಾರೆ. ಅವರ ಸಲಹೆಯಂತೆ ತಂಡ ಕಾರ್ಯನಿರ್ವಹಿಸುತ್ತದೆ. ಈ ನಡುವೆ ಹಿಂದೆ ವಿಶ್ವಕಪ್‌ ಆಡಿದವರಲ್ಲೆಲ್ಲ ಸಲಹೆ ಕೇಳುತ್ತ ಹೋದರೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡಿ ಆಟಗಾರರಲ್ಲಿ ಗೊಂದಲ ಉಂಟಾಗಬಹುದು. ಇಂಥ ನಿರೀಕ್ಷೆಗಳ ಬದಲಾಗಿ ಎಲ್ಲಿಯಾದರೂ ಪಂದ್ಯ ನಡೆಯುತ್ತಿರುವಲ್ಲಿಗೆ ಹೋಗಿ, ಪಂದ್ಯ ವೀಕ್ಷಿಸಿ, ನಾಲ್ಕು ಮಾತುಗಳನ್ನಾಡಿ ಶುಭ ಹಾರೈಸಿದರೆ ಅದು ದೊಡ್ಡ ಮನಸ್ಸು.

ತಂಡದಲ್ಲಿ ಯಾವುದೋ ಆಟಗಾರನ ಬಗ್ಗೆ ಅಸಮಾಧಾನವಿದ್ದಾಗಲೂ ಇಂಥ ಅಭಿಪ್ರಾಯಗಳು ಹೊರ ಬರುವುದು ಸಹಜ. ಭಾರತ ತಂಡ ಇದುವರೆಗೂ ಉತ್ತಮವಾಗಿ ಆಡಿದೆ. ಅವರ ಅನುಭವದ ವ್ಯಾಪ್ತಿಯಲ್ಲಿ ಆಡುತ್ತಿದ್ದಾರೆ. ಅದು ಯಶಸ್ಸು ಕಂಡಿದೆ. ಸೆಮಿಫೈನಲ್‌ ವರೆಗೂ ತಂಡ ತಾನು ಹಾಕಿಕೊಂಡ ಯೋಜನೆಯ ಪ್ರಕಾರ ಆಡಿ ಜಯ ಕಂಡಿದೆ. ಈ ನಡುವೆ ಕಪಿಲ್‌ ದೇವ್‌ ಸಲಹೆ ತಂಡಕ್ಕೆ ಅಗತ್ಯ ಇದೆಯೇ? ಹಾಗೆ ಭಾರತದಲ್ಲಿ ಎಷ್ಟು ಮಂದಿ ಮಾಜಿ ಆಟಗಾರರಿಲ್ಲ? ನಾಳೆ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರೆ? “ಕಪಿಲ್‌ ದೇವ್‌ ಅವರನ್ನು ಕೇಳಿದರು, ನನ್ನಲ್ಲಿ ಒಂದು ಸಲಹೆ ಕೇಳಿಲ್ಲ,ʼ ಎಂಬ ಮಾತು ಉದ್ಭವಿಸುವುದಿಲ್ಲವೇ?

ಇದೇ ಕಪಿಲ್‌ ದೇವ್‌ ಐಪಿಎಲ್‌ ವಿರುದ್ಧವಾಗಿ ಐಸಿಎಲ್‌ ಆರಂಭಿಸಿದರು. ಅದರಲ್ಲಿ ಅನೇಕ ಆಟಗಾರರ ಬದುಕು ಅತಂತ್ರವಾಯಿತು. ಅಂತಿಮವಾಗಿ ಕಪಿಲ್‌ ದೇವ್‌ ಅವರೇ ಐಸಿಎಲ್‌ ತೊರೆದು ಬಿಸಿಸಿಐ ತೆಕ್ಕೆಗೆ ಬಂದರು. ಆ ಬಳಿಕ ಬಿಸಿಸಿಐನಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಐಸಿಎಲ್‌ ಆರಂಭಿಸಿದಾಗ ಬಿಸಿಸಿಐ ಬಗ್ಗೆ ಪ್ರತಿಯೊಂದು ಹಂತದಲ್ಲೂ ಟೀಕೆ ಇದ್ದೇ ಇರುತ್ತಿತ್ತು. ಈಗ ಮೌನಕ್ಕೆ ಮರೆಯಾಗಿದ್ದಾರೆ. ಏಕೆಂದರೆ ಹೊನಲು ಬೆಳಕು ಅಳವಡಿಸುವ ಉದ್ಯಮದಲ್ಲಿ ತೊಡಗಿದ್ದಾರೆ.

ಸಾಧ್ಯವಾದರೆ ಒಂದು ಪತ್ರಿಕಾಗೋಷ್ಠಿ ಮಾಡಿ ಭಾರತ ತಂಡಕ್ಕೆ ಈ ರೀತಿಯ ಸಲಹೆಗಳನ್ನು ನೀಡುತ್ತಿದ್ದೇನೆ, ಅವರು ನಾಳೆಯ ಸೆಮಿಫೈನಲ್‌ನಲ್ಲಿ ಈ ರೀತಿಯಾಗಿ ಆಡಬೇಕು ಎಂದು ಏನಾದರೂ ಹೊಸ ವಿಷಯ ಇದ್ದರೆ ತಿಳಿಸಬಹುದು. ನನಗೆ ಕರೆ ಮಾಡಿ ಸಲಹೆ ಕೇಳಿಲ್ಲ ಎಂಬುದು ಕ್ರೀಡಾ ಸ್ಫೂರ್ತಿಯ ಮಾತಲ್ಲ.

Related Articles