Thursday, September 19, 2024

ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ಯಾಕಿಲ್ಲ?

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 84 ದಿವ್ಯಾಂಗ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ಈ ಬಾರಿ 29 ಪದಕಗಳನ್ನು ಗೆದ್ದು ಪದಕಗಳ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿರುವುದು ಐತಿಹಾಸಿಕ ಸಾಧನೆ. ಸಾಮಾನ್ಯರಿಗಾಗಿ ಭಾರದಲ್ಲಿ ಎಷ್ಟೆಲ್ಲ ಕ್ರೀಡಾಂಗಣ ಇದೆ. ಆದರೆ ದಿವ್ಯಾಂಗರ ಅಭ್ಯಾಸಕ್ಕಾಗಿ ಎಲ್ಲಿಯಾದರೂ ಒಂದು ಪ್ರತ್ಯೇಕವಾದ ಕ್ರೀಡಾಂಗಣ ಇದೆಯೇ? ಎಂಬ ಪ್ರಶ್ನೆ ಉದ್ಭವಿಸಿದರೆ, ನಮಗೆ ಸಿಗುವುದು “ಇಲ್ಲ” ಎಂಬ ಉತ್ತರ. ಭಾರತ ಮಾತ್ರವಲ್ಲ ಜಗತ್ತಿನ ಯಾವ ಭಾಗದಲ್ಲೂ ಇಂಥ ವಿಶೇಷವಾದ ಕ್ರೀಡಾಂಗಣ ಇದ್ದಂತಿಲ್ಲ. Why there is no special stadium for Para Athletes?

ಅನೇಕ ಕ್ರೀಡಾಂಗಣಗಳಲ್ಲಿ ದಿವ್ಯಾಂಗರಿಗಾಗಿ ವಿಶೇಷ ಪ್ರವೇಶ ದ್ವಾರ ಇರುವುದಿಲ್ಲ. ಅವರು ಕ್ರೀಡಾ ಕೂಟಗಳನ್ನು ನೋಡಬೇಕಾದರೆ ಸಾಮಾನ್ಯರಂತೆ ಹಣ ಕೊಟ್ಟು ಟಿಕೆಟ್‌ ಖರೀದಿಸುವುದು, ಇಲ್ಲವೇ ಮನೆಯಲ್ಲಿ ಕುಳಿತು ನೋಡಬೇಕಾದ ಪರಿಸ್ಥಿತಿ. ನಾವು ಅದೆಷ್ಟೋ ಕ್ರೀಡಾಂಗಣಗಳನ್ನು ನಿರ್ಮಿಸುತ್ತೇವೆ. ಆದರೆ ಅವುಗಳ ನಿರ್ವಹಣೆ ಇಲ್ಲದೆ ಹಾಳಾಗಿರುವುದನ್ನು ಗಮನಿಸಿದ್ದೇವೆ. ಆದರೆ ದಿವ್ಯಾಂಗರಿಗಾಗಿ ನಾವು ಯಾವುದೇ ಕ್ರೀಡಾಂಗಣವನ್ನು ಕಟ್ಟಿಲ್ಲ. ಜಾತ್ರೆಯ ಮರುದಿನ ಕೆಲಸಗಾರರು ಸೇರುವಂತೆ ಒಲಿಂಪಿಕ್ಸ್‌ ಬಳಿಕ ಪ್ಯಾರಾಲಿಂಪಿಕ್ಸ್‌ ನಡೆಯುತ್ತಿರುವುದು ಸಾಮಾನ್ಯ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಅಧ್ಯಕ್ಷ ಆಂಡ್ರ್ಯು ಪಾರ್ಸನ್ಸ್‌ ನೀಡಿರುವ ಹೇಳಿಕೆ ತೃಪ್ತಿಕರವಾಗಿಲ್ಲ, “ಪ್ಯಾರಾಲಿಂಪಿಕ್ಸ್‌ ಕ್ರೀಡೆಯು ಒಲಿಂಪಿಕ್ಸ್‌ಗಿಂತ ಮೊದಲು ನಡೆದರೆ ಅದು ಒಲಿಂಪಿಕ್ಸ್‌ಗೆ ಮುನ್ನ ನಡೆಸುವ ಪರೀಕ್ಷೆಯಂತೆ ಇರುತ್ತದೆ. ಅದು ಒಂದು ರೀತಿಯಲ್ಲಿ ಟ್ರಯಲ್‌ ಅಥವಾ ಅಭ್ಯಾಸ ನಡೆಸಿದಂತೆ ಆಗುತ್ತದೆ, ಆದ್ದರಿಂದ ಪ್ಯಾರಾಲಿಂಪಿಕ್ಸ್‌, ಒಲಿಂಪಿಕ್ಸ್‌ ನಡೆದ ಬಳಿಕವೇ ನಡೆದರೆ ಉತ್ತಮ,” ಎಂದಿದ್ದಾರೆ.

ಇತರ ಕ್ರೀಡಾಕೂಟಗಳಿಗೆ ದಿವ್ಯಾಂಗರಿಗೆ ವಿಶೇಷ ಪ್ರವೇಶ ಇದೆಯೇ?: ಉತ್ತರ ಇಲ್ಲ. ಅವರು ನಮ್ಮಂತೆ ಸರದಿಯಲ್ಲಿ ನಿಂತು ಟಿಕೆಟ್‌ ಖರೀದಿಸಿ ಪಂದ್ಯಗಳನ್ನು ನೋಡಲು ಆಗುವುದಿಲ್ಲ. ಈ ವಿಷಯ ಗೊತ್ತಿದ್ದರೂ ಸಂಘಟಕರು ಅವರಿಗೆ ವಿಶೇಷವಾದ ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಅವರಿಗೆ ವಿಶೇಷವಾದ ಅಸನದ ವ್ಯವಸ್ಥೆ, ಸೂಕ್ತ ಸ್ಥಳದಲ್ಲಿ ಇರಬೇಕೆಂಬುದರ ಅರಿವೂ ಇರುವುದಿಲ್ಲ. ಅನೇಕ ಕ್ರಿಕೆಟ್‌ ಟೂರ್ನಿಗಳು ನಡೆಯುವಾಗ ಕೆಲವು ಕ್ರಿಕೆಟ್‌ ತಂಡಗಳು ಹತ್ತಿರದಲ್ಲಿರುವ ದಿವ್ಯಾಂಗರ ಶಾಲೆ ಅಥವಾ ಸಂಸ್ಥೆಗಳಿಗೆ ಭೇಟಿ ನೀಡಿ ಅನುಕಂಪ ತೋರಿಸಿ ಒಂದು ಫೋಟೋ ಬಿತ್ತರ ಮಾಡುತ್ತಾರೆ. ಆದರೆ ಅದೇ ಕ್ರಿಕೆಟ್‌ ತಂಡದ ಆಡಳಿತ ಮಂಡಳಿಗೆ ದಿವ್ಯಾಂಗರಿಗಾಗಿ ಒಂದು ವಿಶೇಷ ಪ್ರವೇಶ, ಆಸನದ ವ್ಯವಸ್ಥೆ ಮಾಡುವ ಮನಸ್ಸು ಯಾಕೆ ಬರುವುದಿಲ್ಲ?.

ಭಾರತದಲ್ಲಿ 6,33,80,000 ದಿವ್ಯಾಂಗರಿದ್ದಾರೆ. ಅದರಲ್ಲಿ 56% ಪುರುಷರು ಮತ್ತು 44% ಮಹಿಳೆಯರು. ಇದರಲ್ಲಿ 69%  ರಷ್ಟು ದಿನ್ಯಾಂಗರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ಒಟ್ಟು 21 ರೀತಿಯ ದಿವ್ಯಾಂಗರಿದ್ದಾರೆ. ಬರೇ ಚುನಾವಣೆ ಬಂದಾಗ ನಾವು ಇವರುಗಳ ಬಗ್ಗೆ ಕಾಳಜಿ ವಹಿಸುತ್ತೇವೆ. ಮತ್ತೆ ಮರೆತುಬಿಡುತ್ತೇವೆ.

ಚಿತ್ರ ನೋಡಿದ ಹಾಗಿಲ್ಲ ವಾಸ್ತವ: ಪ್ಯಾರಲಂಪಿಕ್ಸ್‌ನ ಹಲವಾರು ಫೋಟೋಗಳನ್ನು ನಾವು ನೋಡುತ್ತಿದ್ದೇವೆ, ಬಹಳ ಭವ್ಯವಾಗಿದೆ ಎಂದೆನಿಸುತ್ತದೆ. ಆದರೆ ಕ್ರೀಡಾಪಟುಗಳ ವಾಸ್ತವ ಬದುಕು ಬೇರೆಯೇ ಇರುತ್ತದೆ. ಇಲ್ಲಿ ಪದಕ ಗೆದ್ದರೆ ಮಾತ್ರ ಹೈಲೈಟ್ ಆಗುತ್ತಾರೆ. ಉಳಿದವರು ಅದೇ ನೋವು ನುಂಗಿಕೊಂಡು ಮುಂದೆ ಸಾಗುತ್ತಾರೆ. ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಮೊದಲ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದುಕೊಟ್ಟ ದೀಪಾ ಮಲಿಕ್‌ ಅವತು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. “ನಾವು ಚಾಂಪಿಯನ್ನರು ನಿಜ, ಆದರೆ ಎಲ್ಲರಂತೆ ನಡೆದಾಡಲಾಗದು. ವಿಮಾನದಲ್ಲಿ ದೂರದ ದೇಶಗಳಿಗೆ ಪ್ರಯಾಣ ಮಾಡುವಾಗ ಕಷ್ಟಗಳು ಹೇಳತೀರದು. ದಿವ್ಯಾಂಗರಿಗೆ ಪ್ರತ್ಯೇಕ ಕ್ರೀಡಾಂಗಣ ಸ್ವಾಗತಾರ್ಹ ಮತ್ತು ಅಗತ್ಯವೂ ಕೂಡ, “ಎಂದಿದ್ದಾರೆ.

Related Articles