ಭಾರತದಲ್ಲಿ ಈಗ ಐಸಿಸಿ ವಿಶ್ವಕಪ್ ನಡೆಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ವಿಶ್ವಕಪ್ ಮುಗಿಯುತ್ತಿದ್ದಂತೆ ಚೆನ್ನೈನಲ್ಲಿ ಹಿರಿಯರ ವಿಶ್ವಕಪ್ ನಡೆಯಲಿದೆ. ಈಗಾಗಲೇ ಮಾಜಿ ಕ್ರಿಕೆಟಿಗ ಸಬಾ ಕರೀಂ ಅವರ ನೇತೃತ್ವದಲ್ಲಿ ಆಯ್ಕೆ ಟ್ರಯಲ್ಸ್ ನಡೆದಿದೆ. ಕರ್ನಾಟಕದಿಂದ ಹಿರಿಯ ಆಟಗಶರ ರಾಜಗೋಪಾಲ್ ನಾಯ್ಡು ಅವರ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ರಾಜ್ ನಾಯ್ಡು ಅವರು ಹಿರಿಯರ ವಿಶ್ವಕಪ್ ಆಡುತ್ತಿದ್ದಾರೆ ಎನ್ನುವುದರ ಜೊತೆಯಲ್ಲಿ ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ಈಗ ಸೂಕ್ತ ಸಮಯ. Karnataka’s Rajgopal Naidu who represent India at world Veterans Cricket world Cup.
ರಾಜ್ ನಾಯ್ಡು ಅವರು ವೃತ್ತಿಯಲ್ಲಿ ಜನಪ್ರಿಯ ವಕೀಲರು. ಆದರೆ ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಪ್ರಥಮ ಡಿವಿಜನ್ ಲೀಗ್‌ನಲ್ಲಿ ಅಕೀಲರ ಸಂಘ ತಂಡದ ಪರ ಆಟಗಾರ. 1990-91ರ ಅವಧಿಯಲ್ಲಿ ಉತ್ತಮ ಬ್ಯಾಟ್ಸ್‌ಮನ್ ಹಾಗೂ ಲೆಗ್ ಸ್ಪಿನ್ ಬೌಲರ್. ವಕೀಲರ ಸಂಘದ ಬಿ ಟೀಮ್ ನಿರ್ಮಿಸುವಲ್ಲಿಯೂ ರಾಜ್ ನಾಯ್ಡು ಅವರ ಪಾತ್ರ ಪ್ರಮುಖವಾಗಿತ್ತು.
1995ರಲ್ಲಿ ಬೆಂಗಳೂರು ರೋಟರಿ ಆರ್‌ಐ 3190 ತಂಡ ನಿರ್ಮಿಸುವಲ್ಲಿ ರಾಜ್ ನಾಯ್ಡು ಶ್ರಮಿಸಿದ್ದರು. ಮೈಸೂರಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ರಾಜ್ ನಾಯ್ಡು ಅವರ ಪಾತ್ರ ಪ್ರಮುಖವಾಗಿತ್ತು. ಪುಣೆ ಸೇರಿದಂತೆ ದೇಶದ ವಿವಿಧ ತಂಡಗಳು ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದವು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹೀಗೆ ಪಾಕಿಸ್ತಾನ ಹೊರತಾಗಿ ಟೆಸ್ಟ್ ಕ್ರಿಕೆಟ್ ಆಡಿದ ಎಲ್ಲ ರಾಷ್ಟ್ರಗಳಿಗೂ ರಾಜ್ ನಾಯ್ಡು ಅವರು ಪ್ರವಾಸ ಮಾಡಿರುತ್ತಾರೆ.
ರವಿ ರಾಮನ್ ಅವರು ದಕ್ಷಿಣ ಭಾರತದ ರೋಟರಿ ಸಮನ್ವಯಕಾರರಾಗಿದ್ದವರು ಭಾರತೀಯ ಹಿರಿಯರ ಕ್ರಿಕೆಟ್ ಸಂಸ್ಥೆಯನ್ನು ಸ್ಥಾಪಿಸಿದರು. ಇಂಗ್ಲೆಂಡ್‌ನಲ್ಲಿದ್ದ ಅನಿವಾಸಿ ಭಾರತೀಯ ಕ್ರಿಕೆಟಿಗರನ್ನು ಸೇರಿಸಿಕೊಂಡು ಮೊದಲು ಇಂಗ್ಲೆಂಡ್‌ನಲ್ಲಿ ಪಂದ್ಯವನ್ನು ಆಯೋಜಿಸುತ್ತಾರೆ. 2022ರಲ್ಲಿ ಬ್ರಿಸ್ಬೇನ್‌ನ ಸನ್‌ಶೈನ್ ಕೌಂಟಿಯಲ್ಲಿ ಟೂರ್ನಿ ನಡೆದಿತ್ತು. ಇಲ್ಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ಕ್ರಿಕೆಟ್ ಆಡುವ ರಾಷ್ಟ್ರಗಳು ಪಾಲ್ಗೊಂಡಿದ್ದವು. ಹಿರಿಯರ ಕ್ರಿಕೆಟ್‌ನಲ್ಲಿ 50+ ಮತ್ತು 60+ ವಯೋಮಿತಿಯ ಆಟಗಾರರು ಪಾಲ್ಗೊಳ್ಳುತ್ತಾರೆ. ಕಳೆದ ಬಾರಿ ರಾಜ್ ನಾಯ್ಡು ಆಯ್ಕೆಯಾದರೂ ಕಾರ್ಯದ ಒತ್ತಡದ ಕಾರಣ ಪಾಲ್ಗೊಂಡಿರಲಿಲ್ಲ. ಕಳೆದ ವರ್ಷ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ ರಾಜ್ ನಾಯ್ಡು. ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಆಡುವ ರಾಜ್ ನಾಯ್ಡು, “ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಭಾರತದ ಹೆಸರಿನಲ್ಲಿ, ವಿಸಿಐ ಲಾಂಚನದಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ವಿದೇಶ ಪ್ರವಾಸ ಎಲ್ಲರೂ ಮಾಡುತ್ತಾರೆ. ಆದರೆ ಕ್ರೀಡೆಯ ಮೂಲಕ ದೇಶವನ್ನು ಪ್ರತಿನಿಧಿಸುವಾಗ ಸಿಗುವ ಆನಂದವೇ ಬೇರೆ,ʼ ಎನ್ನುತ್ತಾರೆ.
ಈ ಬಾರಿ 22 ಆಟಗಾರರ ಆಯ್ಕೆ:
ಚೆನ್ನೈನಲ್ಲಿ ನಡೆಯಲಿರುವ ಹಿರಿಯರ ವಿಶ್ವಕಪ್‌ನಲ್ಲಿ ಭಾರತ ದೇಶವನ್ನು 22 ಆಟಗಾರರು ಪ್ರತಿನಿಧಿಸಲಿದ್ದಾರೆ. ಮಾಜಿ ಆಟಗಾರ ಸಾಬಾ ಕರೀಂ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದು ಉತ್ತಮ ತಂಡವನ್ನು ಸಜ್ಜುಗೊಳಿಸಲಿದ್ದಾರೆ. ಮಾಜಿ ಆಟಗಾರರಾದ ಅರುಣ್ ಲಾಲ್, ಕೀರ್ತಿ ಅಜಾದ್, ರಾಜೇಶ್ ಚೌಹಾಣ್ ಹಾಗೂ ಹಿರಿಯ ವಿಕೆಟ್ ಕೀಪರ್ ಸಂಜಯ್ ಸೇರಿದಂತೆ ಪ್ರಮುಖರು ಈ ಬಾರಿ ಆಡಲಿದ್ದಾರೆ. ಈಗಾಗಲೇ 9 ರಾಷ್ಟ್ರಗಳು ಪಾಲ್ಗೊಳ್ಳುವುದು ಖಚಿತವಾಗಿದೆ. ಭಾರತ ಸೇರಿದಂತೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ಪಾಕಿಸ್ತಾನ, ಅಮೆರಿಕ, ಕೆನಡ ಮೊದಲಾದ ರಾಷ್ಟ್ರಗಳ ತಂಡಗಳು ಚೆನ್ನೈಗೆ ಆಗಮಿಸಲಿವೆ. ಕರ್ನಾಟಕದಿಂದ ಇನ್ನೋರ್ವ ಆಲ್ರೌಂಡರ್ ಉಡುಪಿ ಉದಯ್ ಕಟಪಾಡಿ ಕೂಡ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
“ವೃತ್ತಿ ಬದುಕಿನ ಜೊತೆಯಲ್ಲಿ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನಲ್ಲಿ ಹಣ ಮುಖ್ಯವಲ್ಲ. ಉತ್ತಮ ಆರೋಗ್ಯ ಮತ್ತು ನೆಮ್ಮದಿ ಮುಖ್ಯ. ಕ್ರೀಡೆ ನಮಗೆ ಇವೆರಡನ್ನೂ ನೀಡುತ್ತದೆ. ಹೊಸ ದೇಶ, ಹೊಸ ಜನರ ಪರಿಚಯವಾಗುತ್ತದೆ. ಸಾಂಸ್ಕೃತಿಕ ವಿನಿಮಯವಾಗುತ್ತದೆ. ನಮ್ಮ ವೃತ್ತಿ ಬದುಕಿಗೆ ಬೇಕಾದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು,” ಎಂದು ರಾಜ್ ನಾಯ್ಡು ಅವರು ಯುವಕರಿಗೆ ಕರೆ ನೀಡಿದ್ದಾರೆ.