ಇದು ಕ್ರೀಡಾ ಜಗತ್ತಿನ ಅಚ್ಚರಿ. ಜಮ್ಮೂ ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಜಗತ್ತಿನ ಮೊದಲ ದೇವಾಲಯ. World first Temple to train the Sports persons is Shri Mata Vaishno devi Temple
ಭಾರತದಲ್ಲಿ ಶ್ರೀಮಂತ ದೇವಸ್ಥಾನಗಳಾದ ತಿರುಪತಿಯ ಶ್ರೀ ವೆಂಕಟೇಶ್ವರ, ಕೇರಳದ ತಿರುವನಂತಪುರದ ಶ್ರೀ ಅನಂತಪದ್ಮನಾಭ, ಅಥವಾ ಯಾವುದೇ ಮಸೀದಿ, ಯಾವುದೇ ಚರ್ಚ್ ಪ್ರತ್ಯೇಕವಾದ ಕ್ರೀಡಾ ತರಬೇತಿ ಕೇಂದ್ರವನ್ನು ಹೊಂದಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾಪಟುಗಳನ್ನು ಕಳುಹಿಸಿದ ಉದಾಹಣೆಗಳಿವೆಯೇ? ಜಗತ್ತಿನಲ್ಲೇ ಈ ರೀತಿಯ ನಿದರ್ಶನ ಸಿಗುವುದು ಕಷ್ಟ. ಆದರೆ ಒಂದು ನಿದರ್ಶನ ಇದೆ. ಅದೂ ಭಾರತದಲ್ಲೇ. ಇಲ್ಲಿಯ ಕ್ರೀಡಾ ಪಟುಗಳ ಬದುಕಿನ ಕುರಿತು ಅರಿಯಲು ಹೊರಟಾಗ ಹಿಂದೆಂದೂ ಕೇಳರಿಯದ ಅಚ್ಚರಿಯೊಂದು ಗಮನಕ್ಕೆ ಬಂತು.
ಜಮ್ಮುಮತ್ತು ಕಾಶ್ಮೀರದ ಉಧಂಪುರ ಕಟ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಕ್ರೀಡಾ ಮಂಡಳಿ ಇದ್ದು, ಇಲ್ಲಿ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಹಿಂದೂ ದೇವಾಲಯಕ್ಕೆ ಸೇರಿದ ಮಾತಾ ವೈಷ್ಣೋದೇವಿ ಕ್ರೀಡಾಮಂಡಳಿಯ ತರಬೇತಿ ಕೇಂದ್ರದಲ್ಲಿ ಸಮಾಜದ ಎಲ್ಲ ವರ್ಗದವರಿಗೂ ತರಬೇತಿ ನೀಡಲಾಗುತ್ತದೆ ಎಂದು ಆರ್ಚರಿ ಕೋಚ್, ಕುಲದೀಪ್ ವೆದ್ವಾನ್, ತಿಳಿಸಿದ್ದಾರೆ.
“ನಮ್ಮಲ್ಲಿ ಫುಟ್ಬಾಲ್, ವಾಲಿಬಾಲ್, ಟೇಬಲ್ ಟೆನಿಸ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ವೃತ್ತಿಪರ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ಜಾತಿ ತಾರತಮ್ಯ ಇರಕೂಡದು ಈ ಕಾರಣಕ್ಕಾಗಿ ಇಲ್ಲಿ ಮುಸಲ್ಮಾನರಿಗೂ ತರಬೇತಿ ನೀಡುತ್ತಿದ್ದೇವೆ. ಇಲ್ಲಿಯೇ ತರಬೇತಿ ಪಡೆದ ಇಬ್ಬರು ಬಿಲ್ಗಾರರು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಆರ್ಚರ್ ಜ್ಯೋತಿ ಮತ್ತು ರಾಕೇಶ್ ಕುಮಾರ್ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿರುವುದು ಮಾತಾ ವಿಷ್ಣೋದೇವಿ ಕ್ರೀಡಾ ಸಂಸ್ಥೆಯ ಪಾಲಿಗೆ ಹೆಮ್ಮೆಯ ಸಂಗತಿ,” ಎಂದು ಕುಲ್ ದೀಪ್ ಹೇಳಿದ್ದಾರೆ.
ವೈದ್ಯರು ನೀಡಿದ ಔಷಧ ಅಡ್ಡಪರಿಣಾಮವಾಗಿ ಪೊಲಿಯೋಗೆ ತುತ್ತಾದ ಜ್ಯೋತಿಗೆ ವೈಷ್ಣೋವಿದೇವಿ ಕ್ರೀಡಾಸಂಸ್ಥೆ ಬದುಕು ನೀಡಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಅವರೀಗ ಆರ್ಚರಿಯಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಅಪಘಾತದಲ್ಲಿ ತನ್ನ ಕಾಲುಗಳನ್ನೇ ಕಳೆದುಕೊಂಡ ರಾಕೇಶ್ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಗೆಳೆಯರು ಆತನನ್ನು ರಕ್ಷಿಸಿದರು. ವೈಷ್ಣೋವಿದೇವಿ ಕ್ರೀಡಾ ಅಕಾಡೆಮಿ ಬಿಲ್ಗಾರಿಕೆಯಲ್ಲಿ ಅವರನ್ನು ಪಳಗಿಸಿ ಹೊಸ ಬದುಕು ನೀಡಿತು. ವಿಶ್ವ ಆರ್ಚರಿಯಲ್ಲಿ ಪ್ರಭುತ್ವ ಸಾಧಿಸಿದ ರಾಕೇಶ್, ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಮೊದಲ ಬಿಲ್ಗಾರನೆನಿಸಿದರು.
ಸರಕಾರದ ಸಹಾಯವನ್ನೇ ನಂಬಿಕೊಂಡು ಕುಳಿತಿದ್ದರೆ ಜಮ್ಮುವಿನ ಅದೆಷ್ಟೋ ಕ್ರೀಡಾಪ್ರತಿಭೆಗಳು ಮೂಲೆಗುಂಪಾಗುತ್ತಿದ್ದವು. ಆದರೆ ವೈಷ್ಣೋವಿದೇವಿ ದೇವಸ್ಥಾನ ಭಕ್ತರ ಕಾಣಿಕೆಯಿಂದ ಕ್ರೀಡಾ ಸೇವೆಗೂ ಮುಂದಾಯಿತು. ಈಗ ಖೇಲೋ ಇಂಡಿಯಾ ದಲ್ಲಿ ನೋಂದಾವಣೆಗೆ ಅವಕಾಶ ಸಿಕ್ಕಿದೆ. ಕೇಂದ್ರ ಸರಕಾರದ ಮೆಚ್ಚುಗೆಗೂ ಪಾತ್ರವಾಗಿದೆ. ದಕ್ಷಿಣ ಭಾರತದ ಶ್ರೀಮಂತ ದೇವಾಲಯಗಳು ಗ್ರಾಮೀಣ ಪ್ರದೇಶದಲ್ಲಿ ಇಂಥಹ ಕ್ರೀಡಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರೆ ಅದೆಷ್ಟೋ ಬಡ ಪ್ರತಿಭೆಗಳಿಗೆ ನೆರವಾಗಬಹುದು.