ಸೋಮಶೇಖರ್ ಪಡುಕರೆ, ಬೆಂಗಳೂರು
ತಾಯಿ ಅಂತಾರಾಷ್ಟ್ರೀಯ ಅಥ್ಲೀಟ್, ತಂದೆಯೂ ಅಂತಾರಾಷ್ಟ್ರೀಯ ಅಥ್ಲೀಟ್ ಈಗ ಮಗಳೂ ಅದೇ ಹೆಜ್ಜೆಯಲ್ಲಿ ಸಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾಳೆ. ಒಲಿಂಪಿಯನ್ ಪ್ರಮಿಳಾ ಅಯ್ಯಪ್ಪ ಹಾಗೂ ಅಯ್ಯಪ್ಪ ಅವರ ಪುತ್ರಿ ಕೊಡಗಿನ ಹೆಮ್ಮೆಯ ಕುವರಿ ಉನ್ನತಿ ಫ್ರಾನ್ಸ್‌ನ ನಾರ್ಮಂಡಿಯಲ್ಲಿ ನಡೆದ ವಿಶ್ವ ಸ್ಕೂಲ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
100 ಮೀ ಹರ್ಡಲ್ಸ್‌ನಲ್ಲಿ 13.73ಸೆಕೆಂಡುಗಳಲ್ಲಿ ಗುರಿ ತಲುಪಿದ ಉನ್ನತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಪದಕ ಗೆದ್ದು ಹೆತ್ತವರಂತೆ ದಿಟ್ಟತನದಿಂದ ಜಾಗತಿಕ ಮಟ್ಟಕ್ಕೆ ಹೆಜ್ಜೆ ಇಟ್ಟರು. ಮೆಡ್ಲೆ ರಿಲೇಯಲ್ಲಿಯೂ ಕಂಚಿನ ಪದಕ ಗೆದ್ದರು.
ಉನ್ನತಿ ಅವರ ತಾಯಿ ಪ್ರಮಿಳಾ ಅಯ್ಯಪ್ಪ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು, ನಂತರ 2010ರ ಚೀನಾದ ಗಾಂಗ್‌ಜೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಉನ್ನತಿ ಅವರ ತಂದೆ ಜೂನಿಯರ್ ಏಷ್ಯಾ ಪದಕ ವಿಜೇತರರು ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೋಚ್.
ಪಿಟಿ ಉಷಾ ದಾಖಲೆ ಮುರಿದಿದ್ದ ಉನ್ನತಿ!:
ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 80ಮೀ ಹರ್ಡಲ್ಸ್‌ನಲ್ಲಿ 11.50 ಸೆಕೆಂಡುಗಳಲ್ಲಿ ಗುರಿ ತಲುಪಿದ ಉನ್ನತಿ ದೇಶದ ಶ್ರೇಷ್ಠ ಅಥ್ಲೀಟ್ ಪಿಟಿ ಉಷಾ ಅವರು 1979ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಉಷಾ 12.2 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. 300ಮೀ ಹರ್ಡಲ್ಸ್‌ನಲ್ಲೂ ಉನ್ನತಿ 40.11 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಹೆತ್ತವರ ಹಾದಿಯಲ್ಲಿಯೇ ಮುನ್ನಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಪದಾರ್ಪಣೆ ಮಾಡಿದ್ದಾರೆ.
2008ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಬೀಜಿಂಗ್ ಒಲಿಂಪಿಕ್ಸ್‌ಗೆ ಪ್ರಮಿಳಾ ಅಯ್ಯಪ್ಪ ಆಯ್ಕೆಯಾದಾಗ ಉನ್ನತಿ ಚಿಕ್ಕ ಮಗು. ಆಯ್ಕೆಯಾದ ಕೂಡಲೇ ಮಗಳನ್ನು ಎತ್ತಿಕೊಂಡು ಆನಂದ ಬಾಷ್ಪ ಹರಿಸಿದ್ದರು. “ಆಕೆ ನನ್ನಂತೆಯೇ ಒಲಿಂಪಿಯನ್ ಆಗಬೇಕು ಎಂಬ ಆಸೆ ಇದೆ,” ಎಂದು ಹೇಳಿದ್ದರು. ಅವರು ಹೇಳಿದ್ದು ಮಾತ್ರವಲ್ಲ, ಅದೇ ಹಾದಿಯಲ್ಲಿ ನಡೆದು ಮಗಳನ್ನು ಉತ್ತಮ ಅಥ್ಲೀಟ್ ಆಗಿ ರೂಪಿಸಿದ್ದಾರೆ.
ಉನ್ನತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಸಂಭ್ರಮವನ್ನು www.sportsmail.in ಜತೆ ಹಂಚಿಕೊಂಡ ಪ್ರಮಿಳಾ ಅಪ್ಪಯ್ಯ, “ಉನ್ನತಿಯ ಸಾಧನೆ ಬಹಳ ಖುಷಿಕೊಟ್ಟಿದೆ, ಅವಳ ಸಮ್ಮುಖದಲ್ಲೇ ನಾನು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವೆ, ಏಷ್ಯನ್ ಪದಕ ಗೆದ್ದಿರುವೆ. ನನಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಾಗಲಿಲ್ಲ, ಆದರೆ ಉನ್ನತಿ ಗೆಲ್ಲುವಂತೆ ಮಾಡಬೇಕೆಂಬುದು ನಮ್ಮ ಆಸೆ. ಆ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇವೆ. ಈಗ ಹರ್ಡಲ್ಸ್‌ನಲ್ಲಿ ಪದಕ ಗೆದ್ದಿರುವ ಉನ್ನತಿ, ಮುಂದಿನ ದಿನಗಳಲ್ಲಿ ಹೆಪ್ಟಾಥ್ಲಾನ್‌ನಲ್ಲಿ ಸ್ಪರ್ಧಿಸಲಿದ್ದಾಳೆ.” ಎಂದರು.