ಮೈಸೂರು: ಮೈಸೂರಿನಲ್ಲಿ ನಡೆದ ದಸಾರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಕುಸ್ತಿಪಟು ಶಿವಯ್ಯ ಪೂಜಾರಿ ಈ ಬಾರಿ ದಸರಾ ಕಂಠೀರವ ಗೌರವಕ್ಕೆ ಪಾತ್ರರಾಗಿದ್ದಾರೆ. Wrestler from poor family won the Mysuru Dasara Kanteerava Award.
ತಂದೆ ಮಹಾದೇವಯ್ಯ ಹಾಗೂ ತಾಯಿ ಭಾಗೀರಥಿ ದಂಪತಿಯ ಪುತ್ರ ಶಂಕರಯ್ಯ ಪೂಜಾರಿ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕುಸ್ತಿಪಟು. ಪದಕಗಳು ಅವರ ಮನೆಯಲ್ಲಿ ರಾರಾಜಿಸುತ್ತಿವೆ.ಮೈಸೂರಿನಲ್ಲಿ ಗೆದ್ದ ಗದೆ ಅವರ ಮನೆಯನ್ನು ಸೇರಿದೆ. ರಾಜ್ಯ ಕಂಡ ಶ್ರೇಷ್ಠ ಕುಸ್ತಿ ತರಬೇತುದಾರರಾದ ರತನ್ ಕುಮಾರ್ ಮಠಪತಿ ಹಾಗೂ ಕುಸ್ತಿ ಕೋಚ್ ಶರ್ಮಾಜಿ ಅವರಲ್ಲಿ ತರಬೇತಿ ಪಡೆದಿರುವ ಶಿವಯ್ಯ ಪೂಜಾರಿ ಅವರು ತನ್ನ 9ನೇ ವಯಸ್ಸಿನಿಂದ ತಂದೆಯ ಮುತುವರ್ಜಿಗೆ ಕುಸ್ತಿ ತರಬೇತಿ ಆರಂಭಿಸಿದರು. ಶಿವಯ್ಯ ಅವರ ಅಣ್ಣ ಶಂಕರಯ್ಯ ಕೂಡ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಚಾಂಪಿಯನ್ ಹಾಗೂ ರಾಷ್ಟ್ರ ಮಟ್ಟದ ಕುಸ್ತಿಪಟು ಸದ್ಯ ಧಾರವಾಡದಲ್ಲಿ ತರಬೇತಿ ನೀಡುತ್ತಿದ್ದಾರೆ.
ಶಿವಯ್ಯ ಪೂಜಾರಿ ರಾಜೀವ್ ಗಾಂಧೀ ಖೇಲ್ ಅಭಿಯಾನ ನಡೆದಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು. ರಾಷ್ಟ್ರೀಯ ಚಾಂಪಿಯನ್‌ಷಿಪ್, ನ್ಯಾಷನಲ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದವರು. 23 ವರ್ಷ ವಯೋಮಿತಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಅಂತರ್ ವಿಶ್ವವಿದ್ಯಾನಿಯದಲ್ಲೂ ಕಂಚಿನ ಸಾಧನೆ ಮಾಡಿದರು. ಕಳೆದ ವರ್ಷ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಶಿವಯ್ಯ ರಾಷ್ಟ್ರ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಅದೇ ರೀತಿ ಹಿರಿಯರ ದಕ್ಷಿಣ ವಲಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ಕಂಚಿನ ಪದಕ ಗೆದ್ದು ಭಾರತಕ್ಕೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದರು.
ಮೂರನೇ ಬಾರಿಗೆ ದಸರಾ ಯಶಸ್ಸು: 25 ವರ್ಷ ಪ್ರಾಯದ ಶಿವಯ್ಯ ಪೂಜಾರಿ ಬೆಳಗಾವಿಯ ಹಾರುಗೇರಿಯಲ್ಲಿರುವ ರಾಯಭಾಗ್‌ನಲ್ಲಿ ಎರಡನೇ ವರ್ಷದ ದೈಹಿಕ ಶಿಕ್ಷಣ ವಿದ್ಯಾರ್ಥಿ. ಕಳೆದ ಮೂರು ವರ್ಷಗಳಿಂದ ದಸರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿದಾಗ ಸೆಮಿಫೈನಲ್‌ಗೆ ತೃಪ್ತಿಪಟ್ಟರು. ಕಳೆದ ವರ್ಷ ಫೈನಲ್‌ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತರಾದರು. ಈ ಬಾರಿ ಚಾಂಪಿಯನ್ ಪಟ್ಟ ಗೆದ್ದು ದಸರಾ ಕಂಠೀರವ ಗೌರವಕ್ಕೆ ಪಾತ್ರರಾದರು. ಈ ಬಾರಿ ಪ್ರಶಸ್ತಿ ಗೆಲ್ಲಲು ಐದು ಸುತ್ತಿನ ಹೋರಾಟ ಎದುರಿಸಬೇಕಾಯಿತು ಎನ್ನುತ್ತಾರೆ ಶಿವಯ್ಯ ಪೂಜಾರಿ.
2 ಲಕ್ಷ ಖರ್ಚು ಮಾಡಿದ್ದಕ್ಕೆ 15 ಸಾವಿರ ಬಹುಮಾನ!: ಒಬ್ಬ ಕುಸ್ತಿಪಟು ಒಂದು ವರ್ಷದ ತನಕ ತನ್ನ ಫಿಟ್ನೆಸ್ ಕಾಯ್ದುಕೊಳ್ಳಬೇಕಾದರೆ ಅಷ್ಟೇ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕಾಗುತ್ತದೆ. ವರ್ಷಕ್ಕೆ ಕಡಿಮೆ ಎಂದೂ 2-3 ಲಕ್ಷ ರೂ ದೈಹಿಕ ಕ್ಷಮತೆಗಾಗಿ ಖರ್ಚಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿಷ್ಠಿತ ದಸರಾ ಕಂಠೀರವ ಪ್ರಶಸ್ತಿ ಗೆದ್ದಾಗ ಬರೇ 15 ಸಾವಿರ ನಗದು ಬಹುಮಾನ ನೀಡುವುದು ಸರಿಯಲ್ಲ. “ಕಂಠೀರವ ಪ್ರಶಸ್ತಿಯ ಬಗ್ಗೆ ಗೌರವ ಇದೆ. ಅದಕ್ಕೆ ಬೆಲೆ ಕಟ್ಟಲಾಗದು. ಆದರೆ ನಾವು ವಾಸ್ತವವನ್ನು ಮರೆಯುವಂತಿಲ್ಲ. ಅಕ್ಟೋಬರ್ 3 ರಿಂದ 9 ರವರೆಗೆ ನಾನು ಮೈಸೂರಿನಲ್ಲಿದ್ದೆ. ನಮ್ಮ ನಸತಿ ಸೌಲಭ್ಯವನ್ನು ನಾವೇ ಮಾಡಿಕೊಂಡಿದ್ದೆವು. 15 ಸಾವಿರಕ್ಕೂ ಹೆಚ್ಚು ರೂಪಾಯಿ ಖರ್ಚಾಗಿದೆ. ಅಲ್ಲಿ ಕೊಡುವ ಎರಡು ಚಪಾತಿ ಅನ್ನ ತಿಂದು ಕುಸ್ತಿ ಆಡಲಾಗದು.
ಮುಂದಿನ ವರ್ಷದಲ್ಲಿ ನಗದು ಬಹುಮಾನದ ಮೌಲ್ಯವನ್ನು ಹೆಚ್ಚಿಸಿದರೆ ಉತ್ತಮವಾಗುತ್ತದೆ. ಕುಸ್ತಿಪಟುಗಳನ್ನು ಇತರ ಕ್ರೀಡಾಪಟುಗಳಂತೆ (ಆಹಾರದ ವಿಚಾರದಲ್ಲಿ) ಕಂಡರೆ ಆಗದು. ನಮ್ಮ ಗುರುಗಳಾದ ರತನ್ ಕುಮಾರ್ ಮಠಪತಿಯವರು ನಮ್ಮ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ನಮಗೆ ಉತ್ತಮ ಹೋರಾಟ ನೀಡುವ ಆತ್ಮವಿಶ್ವಾಸವಿದೆ. ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುತ್ತೇನೆಂಬ ಛಲ ಇದೆ,” ಎನ್ನುತ್ತಾರೆ ಶಿವಯ್ಯ ಪೂಜಾರಿ.