Wrestlers’ protests: ಹಣ, ಅಧಿಕಾರ, ಕೀರ್ತಿ ಎಷ್ಟಿದ್ದರೇನು? ಇತರರ ನೋವುಗಳಿಗೆ ಸ್ಪಂದಿಸದಿದ್ದರೆ ಸಮಾಜ ನಿಮಗೆ ಗೌರವ ನೀಡುವುದಿಲ್ಲ. ನೀವು ಈ ಹಿಂದೆ ಚಾಂಪಿಯನ್ ಆಗಿರಬಹುದು, ರಾಷ್ಟ್ರಕ್ಕೆ ಕೀರ್ತಿ ತಂದಿರಬಹುದು ಆದರೆ ನಿಮ್ಮಂತೆಯೇ ಕೀರ್ತಿ ತಂದವರು ಕಷ್ಟದಲ್ಲಿರುವಾಗ ನೀವು ಅಧಿಕಾರದ ಮದದಲ್ಲಿ ಮಾತನಾಡಿದರೆ ಈ ಹಿಂದಿನ ಸಾಧನೆಗಳು ಕೂಡ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಪಿ.ಟಿ. ಉಷಾ ಭಾರತ ಕಂಡ ಶ್ರೇಷ್ಠ ಅಥ್ಲೀಟ್. ರಾಜಕೀಯದಾಟಕ್ಕೆ ಬಳಸಿಕೊಳ್ಳಲು ಅವರನ್ನು ರಾಜ್ಯಸಭಾ ಸದಸ್ಯತ್ವ ನೀಡಿ ಗೌರವಿಸಲಾಯಿತು. ಆದರೆ ಅಧಿಕಾರದ ಅಮಲು ತಲೆಗೇರಿದಾದ ಎಷ್ಟುಒಳ್ಳೆಯವರು ಕೂಡ ತಮ್ಮ ಮೌಲ್ಯ ಕಳೆದುಕೊಳ್ಳುತ್ತಾರೆ ಎಂಬುದುಕ್ಕೆ ಉಷಾ ಉತ್ತಮ ಉದಾಹರಣೆ.
ಬಹಳ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಈಜುಪಟುವೊಬ್ಬರನ್ನು ಅವರ ಮನೆಯಲ್ಲಿ ಸಂದರ್ಶನ ಮಾಡುವ ಅವಕಾಶ ಸಿಕ್ಕಿತು. ಆಗ ಅವರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡರು, ಆಡಳಿತ ವ್ಯವಸ್ಥೆಗೆ ಹೆದರಿದ ಅವರು ಪ್ರಸಾರಕ್ಕೆ ತಡೆಯೊಡ್ಡಿದ್ದರು,” ಹೀಗೆ ಭಾರತದ ಕ್ರೀಡಾ ಇತಿಹಾಸವನ್ನು ಅವಲೋಕಿಸಿದಾಗ ಗೊತ್ತಿದ್ದೂ ಬೆಳಕಿಗೆ ಬಾರದ ಪ್ರಕರಣಗಳು ಸಾಕಷ್ಟಿವೆ. ಸಾಕ್ಷಿ ಮಲಿಕ್, ವಿನೀಶ್ ಫೊಗತ್ ಹಾಗೂ ಬಜರಂಗ್ ಪೂನಿಯಾ ಅವರು ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಿಲ್ಲಿಯ ಜಂತರ್ ಮಂತರ್ನಲ್ಲಿ ಅಹರ್ನಿಶಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುಸ್ತಿಪಟುಗಳ ವರ್ತನೆಯನ್ನು (Wrestlers’ protests) ಖಂಡಿಸಿದ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಮಾಜಿ ಒಲಿಂಪಿಯನ್ ಪಿ.ಟಿ. ಉಷಾ ಅವರು, ಕುಸ್ತಿಪಟುಗಳ ಈ ವರ್ತನೆಗೆ ದೇಶವೇ ತಲೆ ತಗ್ಗಿಸುವಂಥದ್ದು, ಅವರು ನನ್ನನ್ನು ಸಂಪರ್ಕಿಸಬೇಕಿತ್ತು,” ಎಂದು ಹೇಳಿಕೆ ನೀಡಿರುವುದು ಅವರೊಬ್ಬ ಕ್ರೀಡಾಪಟು ಅಲ್ಲ ಎಂಬುದನ್ನು ಸಾಬೀತುಪಡಿದಿದೆ. ಅಧಿಕಾರ ಬಂದಾಗ ಆಡಳಿತ ಪಕ್ಷಕ್ಕೆ ಯಾವ ರೀತಿಯಲ್ಲಿ ಹೊಂದಿಕೊಳ್ಳಬೇಕು ಎಂಬುದನ್ನು ಪಿಟಿ ಉಷಾ ಸಾಬೀತುಪಡಿಸಿದ್ದು ಕ್ರೀಡಾ ವಲಯದಲ್ಲಿ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ.
ತನ್ನ ಅಕಾಡೆಮಿಗೆ ಆದ ಅನ್ಯಾಯವನ್ನು ಸಹಿಸದ ಪಿಟಿ ಉಷಾ ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಂಡು ಕಣ್ಣೀರಿಡುವಾಗ ನ್ಯಾಯ ಅನ್ಯಾಯಗಳ ಪರಿಗಣನೆಯನ್ನು ಗಮನಿಸಲಿಲ್ಲ. ಅಲ್ಲಿ ಲಾಭವೇ ಪ್ರಧಾನವಾಯಿತು. ಅಧಿಕಾರವನ್ನು ಉಳಿಸಿಕೊಳ್ಳಲು ಯಾವುದೇ ಘಟನೆ ನಡೆದಾಗ ಮೌನವಾಗಿರುವುದು ಜನಪ್ರತಿನಿಧಿಗಳ ಅಭ್ಯಾಸ. ವಿನೀಶ್ ಫೊಗತ್ ತಮಗೆ ಕ್ರಿಕೆಟಿಗರು ಬೆಂಬಲ ನೀಡಿಲ್ಲ ಎಂಬ ನೋವನ್ನು ತೋಡಿಕೊಂಡಿದ್ದಾರೆ. ಕಪಿಲ್ ದೇವ್ ಹೊರತಾಗಿ ಯಾವ ಕ್ರಿಕೆಟಿಗರೂ ಈ ಬಗ್ಗೆ ಮೌನ ಮುರಿದಿಲ್ಲ. ಮೌನ ಮುರಿದರೆ ತಮ್ಮ ಸ್ಥಾನಕ್ಕೆ ಅಡ್ಡಿಯಾಗಬಹುದು ಎಂಬುದು ಕ್ರಿಕೆಟಿಗರ ನಿಲುವು. ಏಕೆಂದರೆ ಕ್ರಿಕೆಟ್ ಹಣದಲ್ಲಿ ನಡೆಯುವಂಥದ್ದು, ಮುಂದೆ ಸಿಗುವ ಪ್ರಶಸ್ತಿ, ಸನ್ಮಾನಗಳಿಗೆ ತೊಂದರೆಯಾಗಬಹುದು ಎಂಬುದು ಕ್ರಿಕೆಟಿಗರ ಲೆಕ್ಕಾಚಾರವಿರಬೇಕು.
ಅಂತಾರಾಷ್ಟ್ರೀಯ ಬ್ರಾಂಡ್ಗಳನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಜನರ ಬೆಂಬಲ ಸಿಕ್ಕೆ ಸಿಗುತ್ತದೆ ಎಂಬುದು ಆಡಳಿತ ಪಕ್ಷಗಳ ನಿಲುವು. ಸಚಿನ್ ತೆಂಡೂಲ್ಕರ್ಗೆ ರಾಜ್ಯ ಸಭಾ ಸದಸ್ಯತ್ವ ನೀಡಿ ಭಾರತ ರತ್ನ ಗೌರವ ನೀಡಿರುವುದು ಸ್ಟಾರ್ ಮೌಲ್ಯದ ಲಾಭ ಪಡೆಯುವುದಕ್ಕಾಗಿ, ಗೌತಮ್ ಗಂಭೀರ್ಗೆ ಚುನಾವಣಾ ಟಿಕೆಟ್ ನೀಡಿರುವುದು ಕ್ರಿಕೆಟ್ ಅಭಿಮಾನದ ಲಾಭ ಪಡೆಯುವುದಕ್ಕಾಗಿ, ಅದೇ ರೀತಿ ಕೇರಳದಲ್ಲಿ ಬಿಜೆಪಿಗೆ ಪ್ರಚಾರ ಒದಗಿಸುವ ಪಿಟಿ ಉಷಾ ಅವರಿಗೆ ರಾಜ್ಯ ಸಭಾ ಸದಸ್ಯತ್ವ ನೀಡಲಾಯಿತು. ಗೊಂದಲದ ಗೂಡಾಗಿದ್ದ ಭಾರತೀಯ ಒಲಂಪಿಕ್ಸ್ ಸಂಸ್ಥೆಯನ್ನು ನಿಶ್ಯಬ್ದಗೊಳಿಸುವ ಉದ್ದೇಶದಿಂದ ಪಿಟಿ ಉಷಾ ಅವರಿಗೆ ಐಒಎ ಅಧ್ಯಕ್ಷ ಸ್ಥಾನ ನೀಡಲಾಯಿತು.
ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಿಜೆಪಿ ಸಂಸದ. ಈತನ ವರ್ತನೆ ಬಗ್ಗೆ ದಿಲ್ಲಿ ಪೊಲೀಸರು ಇದುವರೆಗೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಪದಕ ಗೆದ್ದಾಗ ಕಚೇರಿಗೆ ಕರೆಸಿಕೊಂಡು ಫೋಟೋ ತೆಗೆಸಿಕೊಳ್ಳುವ ಪ್ರಧಾನಿಯಾಗಲಿ, ಕ್ರೀಡಾ ಸಚಿವರಾಗಲಿ, ಕುಸ್ತಿ ಸಂಸ್ಥೆಯ ಪದಾಧಿಕಾರಿಗಳಾಗಲೀ ಈ ಬಗ್ಗೆ ಧ್ವನಿ ಎತ್ತಿಲ್ಲ. ಏಕೆಂದರೆ ಈ ಘನಂದಾರಿ ಕೆಲಸ ಮಾಡಿರುವುದು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್. ಘನತೆಯನ್ನು ಕಾಯ್ದುಕೊಳ್ಳಲು ಮೌನಕ್ಕೆ ಸರಿದಿರುವುದು ಸ್ಪಷ್ಟವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕ್ರಿಡಾಪಟುಗಳ ನೆರವಿಗೆ ಬಾರದವರು, ಅವರ ಪರವಾಗಿ ಮಾತನಾಡದವರು ಅವರು ಪದಕ ಗೆದ್ದಾಗ ಸೆಲ್ಫಿ, ಫೋಟೋಗಳಿಗೆ ಫೋಸು ಕೊಡಬಾರದು.
ಈ ಸಂದರ್ಭದಲ್ಲಿ ಎಲ್ಲ ಕ್ರೀಡಾಪಟುಗಳನ್ನು ಟೀಕಿಸಿ ಪ್ರಯೋಜನವಿಲ್ಲ. ಕೆಲವು ಕ್ರೀಡಾಪಟುಗಳು ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪರವಾಗಿ ನಿಂತಿದ್ದಾರೆ. ಚೋಪ್ರಾಗೆ ಯಾವುದೇ ಪ್ರಶಸ್ತಿ, ಪುರಸ್ಕಾರ ತಪ್ಪಿ ಹೋಗುತ್ತದೆ ಎಂಬ ಆತಂಕವಿಲ್ಲ. ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಜ್ವಾಲಾ ಗುಟ್ಟಾ, ಶಿವ ಕೇಶವನ್ ಮೊದಲಾದ ಕ್ರೀಡಾಪಟುಗಳು ಪ್ರತಿಭಟನೆ ನಿರತ ಕ್ರೀಡಾಪಟುಗಳ ಪರವಾಗಿ ಧ್ವನಿ ಎತ್ತಿದ್ದಾರೆ.
ಒಟ್ಟು ಏಳು ಕ್ರೀಡಾಪಟುಗಳು ದಿಲ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಆಡಳಿತ ವ್ಯವಸ್ಥೆಗೆ ಹೆದರಿ ಇನ್ನೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಜನವರಿ ತಿಂಗಳಲ್ಲಿ ಮೊದಲ ಬಾರಿಗೆ ಪ್ರತಿಭಟನೆ ನಡೆದಾಗ ಸುಪ್ರಿಂ ಕೋರ್ಟ್ “ಇದು ಅತ್ಯಂತ ಗಂಭೀರ ಆರೋಪ ತನಿಖೆ ಅಗತ್ಯ” ಎಂದು ಸೂಚಿಸಿತ್ತು. ದೆಹಲಿ ಪೊಲೀಸರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಕುಸ್ತಿಪಟುಗಳು ಮತ್ತೆ ಪ್ರತಿಭಟನೆಗೆ ಮುಂದಾದರು.
ಇದನ್ನೂ ಓದಿ : ಮಾಲ್ದೀವ್ಸ್‌ನಲ್ಲಿ ರಾಹುಲ್ ದ್ರಾವಿಡ್ ಸ್ಕೂಬಾ ಡೈವಿಂಗ್
ಕ್ರೀಡೆ ಎಂದರೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದು, ಪದಕ ಗೆಲ್ಲುವುದು, ಪ್ರಶಸ್ತಿ ಪಡೆಯುವುದು ಮಾತ್ರವಲ್ಲ, ಅದು ನಿತ್ಯ ಬದುಕಿಗೆ ಪೂರಕವಾದುದು. ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಶಿಸ್ತು ಎಲ್ಲವನ್ನೂ ಕಲಿಸುತ್ತದೆ. ಪದಕ ಗೆಲ್ಲದವರೂ ಇತರರಿಗೆ ಮಾದರಿಯಾಗಿರುತ್ತಾರೆ. ಆದರೆ ಕ್ರೀಡಾ ಸಂಸ್ಥೆಯಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇಂಥ ಅಸಹ್ಯ ಕೆಲಸದಲ್ಲಿ ಭಾಗಿಯಾಗುತ್ತಾರೆ. ಪಿಟಿ ಉಷಾ ಅವರ ಬಗ್ಗೆ ಭಾರತದ ಕ್ರೀಡಾ ವಲಯದಲ್ಲಿ ಅಪಾರ ಗೌರವ ಇದ್ದಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡಳಿತ ಪಕ್ಷದ ಪರ ಬ್ಯಾಟಿಂಗ್ ಮಾಡುವ ಅವರ ಈ ಗುಣ ಈಗ ಸಾಕಷ್ಟು ಟೀಕೆಗೆ ಗುರಿಯಾಗುವಂತೆ ಮಾಡಿದೆ. ಅವರ ರಾಜಕೀಯ ಭಕ್ತಿ ತನ್ನಂತೆ ಇರುವ ಕ್ರೀಡಾಪಟುಗಳನ್ನು ಟೀಕಿಸುವಂತೆ ಮಾಡಿದೆ. ಕುಸ್ತಿಪಟುಗಳಿಗೆ ಆದ ನೋವು ಭಾರತದ ಕ್ರೀಡಾ ವಲಯದಲ್ಲಿ ಇತರರಿಗೆ ಆಗಬಾರದು. ಅದಕ್ಕಾಗಿ ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷರನ್ನು ವಿಚಾರಣೆಗೆ ಗುರಿಪಡಿಸಿ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಇದೆ.