Friday, April 19, 2024

ಯೂತ್ ಒಲಿಂಪಿಕ್ಸ್: ದಾಖಲೆ ಬರೆದ ಜೆರೆಮಿ

ಏಜೆನ್ಸೀಸ್ ಬ್ಯೂನಸ್‌ಐರಿಸ್

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಜೆರೆಮಿ ಲಾಲ್‌ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಯೂತ್‌ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿದೆ.ಭಾರತ ಪ್ರಸಕ್ತ ಕ್ರೀಡಾಕೂಟದಲ್ಲಿ ಈಗಾಗಲೇ ಮೂರು ಬೆಳ್ಳಿ ಪದಕ ಗೆದ್ದಿದೆ.

ಕರ್ನಾಟಕದ ಅರ್ಚನಾ ಕಾಮತ್ ಟೇಬಲ್ ಟೆನಿಸ್‌ನಲ್ಲಿ ಮೊದಲ ಸುತ್ತಿನಲ್ಲಿ ಜಯ ಗಳಿಸಿ ಆತ್ಮವಿಶ್ವಾಸದ ಹೆಜ್ಜೆಯನ್ನಿಟ್ಟಿದ್ದಾರೆ. ಹಾಕಿಯಲ್ಲಿ ಭಾರತ ಜಯದ ನಡೆ ಇಟ್ಟಿದೆ. 2014ರ  ಕ್ರೀಡಾಕೂಟದಲ್ಲಿ ಭಾರತ ಎರಡು ಪದಕ ಗೆದ್ದಿರುವುದು ಇದುವರೆಗಿನ ಉತ್ತಮ ಸಾಧನೆಯಾಗಿತ್ತು.
ಪುರುಷರ 62 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಜೆರೆಮಿ ಸ್ನ್ಯಾಚ್‌ನಲ್ಲಿ 120 ಹಾಗೂ 124 ಕೆಜಿ ಭಾರವೆತ್ತಿದರೆ, ಕ್ಲೀನ್ ಹಾಗೂ ಜೆರ್ಕ್‌ನಲ್ಲಿ 142 ಹಾಗೂ 150 ಕೆಜಿ ಭಾರವೆತ್ತಿ ಚಿನ್ನಕ್ಕೆ ಮುತ್ತಿಟ್ಟರು. 124 ಕೆಜಿ ಸ್ನ್ಯಾಚ್ ಹಾಗೂ 150 ಕೆಜಿ ಜೆರ್ಕ್‌ನಲ್ಲಿ ಉತ್ತಮ ಭಾರವೆತ್ತುವ ಮೂಲಕ 15 ವರ್ಷದ ಜೆರೆಮಿ ಚಿನ್ನದ ಸಾಧನೆ ಮಾಡಿದರು. ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲೂ ಜೆರೆಮಿ ಬೆಳ್ಳಿಯ ಸಾಧನೆ ಮಾಡಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದರು. ಅಲ್ಲದೆ ಎರಡು ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.
ಎರಡನೇ ದಿನದಂತ್ಯಕ್ಕೆ ಭಾರತ ಮೂರು ಬೆಳ್ಳಿ (ತುಷಾರ್ ಮಾನೆ 10 ಮೀ. ಏರ್ ರೈಲ್, ತಬಾಬಿ ದೇವಿ 44 ಕೆಜಿ ಜೂಡೋ, ಮೆಹುಲಿ ಘೋಷ್ 10 ಮೀ. ಏರ್ ರೈಲ್) ಪದಕ ಗೆದ್ದಿತ್ತು. ಈಜಿನಲ್ಲಿ ಶ್ರೀಹರಿ ನಟರಾಜ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಟೇಬಲ್ ಟೆನಿಸ್‌ನಲ್ಲಿ ಕರ್ನಾಟಕದ ಅರ್ಚನಾ ಕಾಮತ್ ಹಾಗೂ ಮಾನವ್ ಠಕ್ಕರ್ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜಯ ಗಳಿಸಿದ್ದಾರೆ. ಮಲೇಷ್ಯಾದ ಜೀವನ್ ಚೂಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಕಾಮತ್ 4-2 ಅಂತರದಲ್ಲಿ ಗೆದ್ದರೆ, ಠಕ್ಕರ್ ಸ್ಲೊವಾಕಿಯಾದ ಅಲೆಕ್ಸಾಂಡ್ರಾ ವೊವೋಕ್ ವಿರುದ್ಧ  4-1 ಅಂತರದಲ್ಲಿ ಜಯ ಗಳಿಸಿದರು. ಭಾರತ ಹಾಕಿ ತಂಡ ಆಸ್ಟ್ರೀಯಾ ವಿರುದ್ಧ 9-1 ಗೋಲಗಳಿಂದ ಜಯ ಗಳಿಸಿ ಮುನ್ನಡೆದಿದೆ. ಬ್ಯಾಡ್ಮಿಂಟನ್ ನಲ್ಲಿ  ಭಾರತದ ಲಕ್ಷ್ಯಾ ಸೇನ್ 23-21, 21-8 ಅಂತರದಲ್ಲಿ ಉಕ್ರೇನಿನ ಡೆನೈಲೋ ಬೊಸ್ನ್ಯುಕಿ ವಿರುದ್ಧ ಜಯ ಗಳಿಸಿದರು.

Related Articles