ಬರ್ಮಿಂಗ್ಹ್ಯಾಮ್: ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್, ಬುಧವಾರ ಆರಂಭಗೊಂಡ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದ್ದಾರೆ.
ವಿಶ್ವ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನದಲ್ಲಿರುವ ಶ್ರೀಕಾಂತ್, ಪುರುಷರ ಸಿಂಗಲ್ಸ್ನ ತಮ್ಮ ಮೊದಲ ಪಂದ್ಯದಲ್ಲಿ ಫ್ರಾನ್ಸ್ನ ಬ್ರೈಸ್ ಲೆವರ್ಡೆಜ್ ಅವರನ್ನು 7-21, 21-14, 22-20 ಅಂತರದ ಕಠಿಣ ಹೋರಾಟದಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದರು.
ಶ್ರೀಕಾಂತ್ ಗೆಲುವಿಗೂ ಮುನ್ನ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್, ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದರು. ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಆಟಗಾರ್ತಿ ತೈವಾನ್ನ ತಾಯ್ ತ್ಸು ಯಿಂಗ್ ವಿರುದ್ಧ 14-21, 18-21 ಗೇಮ್ಗಳ ಅಂತರದಲ್ಲಿ ಸೈನಾ ಸೋಲುಂಡರು. 2015ರ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದ ಸೈನಾ, ಫೈನಲ್ನಲ್ಲಿ ಸ್ಪೇನ್ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.
ಮಹಿಳಾ ಡಬಲ್ಸ್ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿಯ ಹೋರಾಟವೂ ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ. ಕರ್ನಾಟಕ ಅಶ್ವಿನಿ ಪೊನ್ನಪ್ಪ ಮತ್ತು ಆಂಧ್ರದ ಸಿಕ್ಕಿ ಜೋಡಿ, 14-21, 13-21 ಗೇಮ್ಗಳಿಂದ ಜಪಾನ್ನ ಮಿಸಾಕಿ ಮಮತ್ಸುಟೊಮೊ ಮತ್ತು ಅಯಾಕ ತಾಕಹಾಶಿ ವಿರುದ್ಧ ಸೋಲು ಕಂಡಿತು. ಜಪಾನ್ ಜೋಡಿ 2016ರ ರಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿತ್ತು.