Saturday, November 23, 2024

ಇಂಡಿಯನ್ ಸೂಪರ್ ಲೀಗ್‌: ಎಫ್‌ಸಿ  ಗೋವಾ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು ಎಫ್‌ಸಿ

ಬೆಂಗಳೂರು: ಎಡು ಗಾರ್ಸಿಯಾ  (35ನೇ ನಿಮಿಷ) ಹಾಗೂ ಡಿಮಾಸ್ ಡೆಲ್ಗಾಡೋ (82ನೇ ನಿಮಿಷ) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರು ಎಫ್‌ಸಿ  ಪ್ರವಾಸಿ ಗೋವಾ ತಂಡದ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ  ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಈ ಜಯದೊಂದಿಗೆ ಬೆಂಗಳೂರು ಎಫ್‌ಸಿ ತಂಡ ಪುಣೆ ವಿರುದ್ಧ  ಸೇಡು ತೀರಿಸಿಕೊಂಡಿತು.
35ನೇ ನಿಮಿಷದಲ್ಲಿ  ಎಡು ಗಾರ್ಸಿಯಾ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್‌ಸಿ ಪ್ರವಾಸಿ ಗೋವಾ ಎಫ್‌ಸಿ ವಿರುದ್ಧ  ಪ್ರಥಮಾರ್ಧದಲ್ಲಿ 1-0 ಅಂತರದಲ್ಲಿ ಮುನ್ನಡೆ ಕಂಡಿತು. ಎಡ ಭಾಗದಿಂದ ಟೋನಿ ಡೊವಾಲೆ ನೀಡಿದ ಕಾರ್ನರ್ ಕಿಕ್ ಕೀಪರ್ ಎಡ ಭಾಗದಲ್ಲಿ ಹಾದು ಬಂತು. ಚೆಂಡಿಗಾಗಿ ಕಾಯುತ್ತಿದ್ದ ಗಾರ್ಸಿಯಾ ಉತ್ತಮ ರೀತಿಯಲ್ಲಿ ಹೆಡರ್ ಮೂಲಕ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಗೋಲ್‌ಕೀಪರ್ ನವೀನ್ ಕುಮಾರ್ ಚೆಂಡಿನ ಮೇಲೆ ನಿಗಾ ವಹಿಸಿದ್ದರು, ಆದರೆ ಚೆಂಡು ಕೈಗೆ ಎಟುಕಲಿಲ್ಲ. ಲೈನ್‌ನಲ್ಲಿ  ನಾಯಕ ಬ್ರೂನೊ ಪಿನ್‌ಹಿರೊ ಕೂಡ ಇದ್ದರು. ಆದರೆ ಚೆಂಡು ಗೋಲ್‌ಬಾಕ್ಸ್‌ನ ಒಳಭಾಗದ ಅಂಚಿನ ಸಾಗಿತು.
ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲಿ  ಮಂದಾರ ದೇಸಾಯ್ ಎಡ ಭಾಗದಿಂದ ತುಳಿದ ಚೆಂಡು ಗೋಲ್‌ಕೀಪರ್  ಗುರ್‌ಪ್ರೀತ್ ಸಿಂಗ್ ಅವರ ಕೈ ಸೇರಿತ್ತು, ಆದರೆ ನಿಯಂತ್ರಣ ತಪ್ಪಿ ಚೆಂಡು ಕೈಯಿಂದ ಹೊರ ಸಾಗಿತು. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಫರಾನ್ ಕೊರೊಮಿನಾಸ್ ಮಿಂಚಿನ ಗೋಲು ಗಳಿಸುವ ಯತ್ನದಲ್ಲಿದ್ದರು, ಅಷ್ಟರಲ್ಲೇ ಗುರ್‌ಪ್ರೀತ್ ಎಚ್ಚೆತ್ತುಕೊಂಡು ಆರಂಭಿಕ ಅಪಾಯವನ್ನು ತಡೆದರು.  ಎಡು ಗಾರ್ಸಿಯಾ ಯಶಸ್ಸು ಕಾಣುವುದಕ್ಕೆ ಮೊದಲು ಇತ್ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು.  ಚೆಂಡು ಹೆಚ್ಚು ಸಮಯ ಗೋವಾದ ನಿಯಂತ್ರಣದಲ್ಲೇ ಇದ್ದಿತ್ತು. ಆದರೆ ಪ್ರಥಮಾರ್ಧದ ಕೊನೆಯ ಭಾಗದಲ್ಲಿ  ಬೆಂಗಳೂರು ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು.
ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಂಕ ಪಟ್ಟಿಯಲ್ಲಿ ಆತಿಥೇಯ ಬೆಂಗಳೂರು ಎಫ್‌ಸಿ ತಂಡ ಪ್ರವಾಸಿ ಗೋವಾ ವಿರುದ್ಧ  ಮತ್ತೊಂದು ಪಂದ್ಯಕ್ಕೆ ಸಜ್ಜಾಯಿತು. 30 ಅಂಕಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಮತ್ತೊಂದು ಜಯದೊಂದಿಗೆ ಲೀಗ್ ಹಂತದಲ್ಲಿ ತಾನೇ ದೊರೆಯೆಂಬುದನ್ನು ಖಚಿತಪಡಿಸಿಕೊಳ್ಳಲು ಹೋರಾಟ ನಡೆಸಲಿದೆ. ಗೋವಾ ತಂಡ 20 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಜಯದೊಂದಿಗೆ ನಾಲ್ಕನೇ ಸ್ಥಾನವನ್ನು ಕಬಳಿಸುವ ತವಕದಲ್ಲಿದೆ.ಆದರೆ ಗೋವಾ ತಂಡಕ್ಕೆ ಬೆಂಗಳೂರಿನಲ್ಲಿ ಇದು ಅಷ್ಟು ಸುಲಭವಾದುದಲ್ಲ. ಈ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಗೋಲಿನ ಮಳೆ ಹರಿದಿತ್ತು. ಪಂದ್ಯದಲ್ಲಿ ಒಟ್ಟು 7 ಗೋಲುಗಳು ದಾಖಲಾಗಿತ್ತು.
ಮನೆಯಂಗಣದಲ್ಲಿ ಬೆಂಗಳೂರು ತಂಡ ಆಡಿರುವ ಆರು ಪಂದ್ಯಗಳಲ್ಲಿ  4 ಗೆಲ್ಲುವ ಮೂಲಕ ಪ್ರಭುತ್ವ ಸಾಧಿಸಿದೆ. ಇಷ್ಟು ಪಂದ್ಯಗಳನ್ನು ಯಾವುದೇ ತಂಡ ಗೆದ್ದಿಲ್ಲ. ಮನೆಯಂಗಣದಲ್ಲಿ ಬೆಂಗಳೂರು ತಂಡ  66.67 ಜಯದ ಸರಾಸರಿ ಹೊಂದಿದೆ. ಮನೆಯಂಗಣದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಬಿಎಫ್‌ಸಿ ಕ್ಲೀನ್ ಶೀಟ್ ಕೂಡ ಹೊಂದಿದೆ.

Related Articles