ಬೆಂಗಳೂರು: ಮುಂಬರುವ ಕಾಮನ್ವೆಲ್ತ್ ಗೇಮ್ಸ್ಗೆ ಮಂಗಳವಾರ ಬೆಂಗಳೂರಿನಲ್ಲಿ ಹಾಕಿ ಇಂಡಿಯಾ ಪ್ರಕಟಿಸಿದ ಭಾರತ ಹಾಕಿ ತಂಡದಲ್ಲಿ ಉಡುಪಿಯ ಹೆಜಮಾಡಿ ಕೋಡಿ ಮೂಲದ ಸೂರಜ್ ಕರ್ಕೇರ ಸ್ಥಾನ ಪಡೆದಿದ್ದಾರೆ.
ಹೆಜಮಾಡಿ ಕೋಡಿಯ ಹರೀಶ್ಚಂದ್ರ ಹಾಗೂ ಆಶಾಲತಾ ಕರ್ಕೇರ ಅವರ ಪುತ್ರರಾಗಿರುವ ಸೂರಜ್ ಚಿಕ್ಕಂದಿನಿಂದಲೇ ಹಾಕಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮುಂಬೈಯಲ್ಲಿ ನೆಲೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋಲ್ ಕೀಪರ್ ಶ್ರೀಜೇಶ್ ಅವರ ಅನುಪಸ್ಥಿತಿಯಲ್ಲಿ ಸೂರಜ್ ಅದ್ಬುತವಾದ ಸಾಧನೆ ಮಾಡಿದ್ದಾರೆ. ಹಾಕಿ ಇಂಡಿಯಾ ಲೀಗ್ನಲ್ಲಿ ಉತ್ತರ ಪ್ರದೇಶ ವಿಜಾರ್ಡ್ಸ್ ಪರ ಆಡಿದ್ದ ಸೂರಜ್ ಕಂಚಿನ ಪದಕ ಗೆದ್ದಿರುವುದಲ್ಲದೆ, ಉತ್ತಮ ಗೋಲ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತ ಜೂನಿಯರ್ ಹಾಕಿ ತಂಡ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಗ, ಸೂರಜ್ ಅವರ ಆಟವನ್ನು ಗಮನಿಸಿದ ಪ್ರಧಾನ ಕೋಚ್ ರೊಲ್ಯಾಂಟ್ ಓಲ್ಟ್ಮನ್ಸ್ 25 ವರ್ಷದ ಈ ಗೋಲ್ಕೀಪರ್ ಕಡೆ ಹೆಚ್ಚಿನ ಗಮನ ವಹಿಸಿದ್ದರು. ಅಜ್ಲಾನ್ ಶಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಶ್ರೀಜೇಶ್ ಅವರ ಸ್ಥಾನವನ್ನು ಸೂರಜ್ ತುಂಬಿದ್ದರು.
2005ರಿಂದ ರಾಷ್ಟ್ರೀಯ ಜೂನಿಯರ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಸೂರಜ್, ಭಾರತದ ಪಾಲಿಗೆ ಹೆಮ್ಮೆಯ ಗೋಲ್ಕೀಪರ್ ಎನಿಸಿದ್ದು, ಜೂನಿಯರ್ ಏಷ್ಯಾಕಪ್ನ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಅವರ ಗೋಲ್ಕೀಪಿಂಗ್ ಕ್ಷಮತೆ ಪ್ರಮುಖ ಪಾತ್ರ ವಹಿಸಿತ್ತು. ಆ ನಂತರ ಹಲವು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದ ಈ ಕನ್ನಡಿಗ ಈಗ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತರಬೇತಿ ಶಿಬಿರದಲ್ಲಿ ಇನ್ನಿಬ್ಬರು ಗೋಲ್ಕೀಪರ್ಗಳಾದ ವಿಕಾಸ್ ದಹಿಯಾ ಹಾಗೂ ಆಕಾಶ್ ಚಿಕ್ಟೆ ಸೇರಿದ್ದರೂ ಸೂರಜ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಪ್ರಕಟಿಸಿದ 18 ಮಂದಿ ಸದಸ್ಯರ ತಂಡದಲ್ಲಿ ಸೂರಜ್ ಕರ್ಕೇರ ಸ್ಥಾನ ಪಡೆದಿರುವ ಬಗ್ಗೆ ತಂದೆ ಹರೀಶ್ಚಂದ್ರ ಕರ್ಕೇರ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಸೂರಜ್ ಸ್ಥಾನ ಪಡೆಯುತ್ತಾನೆಂಬ ಬಗ್ಗೆ ಆತ್ಮವಿಶ್ವಾಸವಿತ್ತು. ವಿಶ್ವ ಹಾಕಿ ಲೀಗ್ ಹಾಗೂ ಅಜ್ಲಾನ್ ಶಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಅವನು ತೋರಿದ ಸಾಧನೆಯನ್ನು ಗಮನಿಸಿದ್ದೇನೆ. ಇದನ್ನು ಆಯ್ಕೆ ಸಮಿತಿಯೂ ಗಮನಿಸಿರುತ್ತದೆ. ಕ್ರಿಕೆಟ್ ಆಟದ ನಡುವೆ ಹಾಕಿಯನ್ನು ಆಯ್ಕೆ ಮಾಡಿಕೊಂಡ ಸೂರಜ್ ಯಾವುದೇ ರೀತಿಯಲ್ಲಿ ಹಿನ್ನಡೆ ಕಾಣದೆ ಇದುವರೆಗೆ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದ್ದಾನೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಪದಕ ಗೆಲ್ಲಲಿ ಎಂದು ತಂಡಕ್ಕೆ ಶುಭ ಹಾರೈಸುತ್ತೇನೆ.
– ಹರೀಶ್ಚಂದ್ರ ಕರ್ಕೇರ, ಸೂರಜ್ ತಂದೆ.
18 ಸದಸ್ಯರನ್ನೊಳಗೊಂಡ ತಂಡವನ್ನು ಮಿಡ್ಫೀಲ್ಡರ್ ಮನ್ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಚಿಂಗ್ಲನ್ಸನಾ ಸಿಂಗ್ ಕಂಗುಜಾಮ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮನ್ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ 2017ರ ಏಷ್ಯಾಕಪ್ ಹಾಗೂ ವಿಶ್ವ ಹಾಕಿ ಲೀಗ್ನಲ್ಲಿ ಕಂಚಿನ ಪದಕ ಗೆದ್ದಿತ್ತು.