ಬೆಂಗಳೂರು: ಕೊಡಗಿನ ವೀರ ರಾಬಿನ್ ಉತ್ತಪ್ಪ ಕ್ರಿಕೆಟ್ ಮೈದಾನದಲ್ಲಿ ತಮ್ಮ ಧಾಮ್ ಧೂಮ್ ಹೊಡೆತಗಳಿಗೆ ಹೆಸರಾದವರು. ಉತ್ತಪ್ಪ ಕ್ರೀಸ್ನಲ್ಲಿದ್ದರೆ ಬೌಂಡರಿ, ಸಿಕ್ಸರ್ಗಳ ಧಮಾಕ, ಅಭಿಮಾನಿಗಳಿಗೆ ಪುಳಕ.
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಆಟಗಾರನೂ ಹೌದು.
ಕರ್ನಾಟಕ ಕ್ರಿಕೆಟ್ನ ದಿಗ್ಗಜ ಆಟಗಾರ ರಾಬಿನ್ ಉತ್ತಪ್ಪ ಫಿಟ್ನೆಸ್ ಬಗ್ಗೆ ಅಷ್ಟೇನೂ ಒಲವು ಹೊಂದಿದ್ದವರಲ್ಲಘಿ.ಆದರೆ ಈಗಿನ ಕ್ರಿಕೆಟ್ ಜಗತ್ತಿನಲ್ಲಿ ಫಿಟ್ನೆಸ್ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಅರಿತಿರುವ ರಾಬಿನ್ ಉತ್ತಪ್ಪ, ಸದ್ದಿಲ್ಲದೆ ಸಿಕ್ಸ್ ಪ್ಯಾಕ್ ವೀರನಾಗಿದ್ದಾರೆ.
ಸಿಕ್ಸ್ ಪ್ಯಾಕ್ ಗಳಿಸಿಕೊಂಡಿರುವ ಚಿತ್ರವನ್ನು ರಾಬಿನ್ ಉತ್ತಪ್ಪ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. 2017ರ ಸಪ್ಟೆಂಬರ್ನಲ್ಲಿ ಹೇಗಿದ್ದೆ, 2018ರ ಮಾರ್ಚ್ನಲ್ಲಿ ಹೇಗಾದೆ ಎಂಬುದನ್ನು ತೋರಿಸುವ ಎರಡು ಚಿತ್ರಗಳನ್ನು ಉತ್ತಪ್ಪ ಪ್ರಕಟಿಸಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಬಿನ್ ಉತ್ತಪ್ಪ ಕಳೆದ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈ ಸಂಗತಿಯನ್ನು ಸ್ವತಃ ಉತ್ತಪ್ಪ ಅವರೇ ’ದಿ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಕಳೆದ 4 ವರ್ಷಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ರಾಬಿನ್ ಉತ್ತಪ್ಪ, ಸತತ 5ನೇ ವರ್ಷವೂ ಕೆಕೆಆರ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿ ಹೆಚ್ಚುವರಿ ಜವಾಬ್ದಾರಿಯಾಗಿ ಉಪನಾಯಕನ ಪಟ್ಟ ಉತ್ತಪ್ಪ ಮುಡಿಗೇರಿದೆ.