Friday, January 3, 2025

ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ… ಬೆಂಗಳೂರಿಗರಿಗೆ ನಿರಾಸೆ!

ಮುಂಬೈ: ಅನುಭವಕ್ಕಿಂತ ದೊಡ್ಡ ಪಾಠ ಮತ್ತೊಂದಿಲ್ಲ. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ 2014ರ ಇಂಗ್ಲೆಂಡ್ ಪ್ರವಾಸ ಮರೆಯಲಾಗದ ಪಾಠ ಕಲಿಸಿದೆ. ಆ ಪಾಠದಿಂದ ಎಚ್ಚೆತ್ತುಕೊಂಡಿರುವ ವಿರಾಟ್ ಕೊಹ್ಲಿ, ಮತ್ತೆ ಅಂದಿನ ತಪ್ಪು ಮರುಕಳಿಸದಿರುವಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

PC: twitter/Virat Kohli
ಮುಂದಿನ ಆಗಸ್ಟ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ ಇಂಗ್ಲಿಷರ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಆ ಟೆಸ್ಟ್ ಸರಣಿಯಲ್ಲಿ ಯಶಸ್ಸು ಗಳಿಸಲು ಸ್ಕೆಚ್ ಹಾಕಿರುವ ಕೊಹ್ಲಿ, ಅದಕ್ಕೂ ಮೊದಲು ಕ್ರಿಕೆಟ್ ಜನಕರ ನಾಡಿನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ.
ಐಪಿಎಲ್ ಮುಗಿದ ಬೆನ್ನಲ್ಲೆ ವಿರಾಟ್ ಕೊಹ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು, ಪ್ರತಿಷ್ಠಿತ ಸರ್ರೆ ಕ್ಲಬ್ ಪರ ಕೌಂಟಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಕೊಹ್ಲಿಗೆ ಬಿಸಿಸಿಐ ಅನುಮತಿ ನೀಡಿದೆ.
ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿರುವ ಕಾರಣ ಜೂನ್ 14ರಿಂದ 18ರವರೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದಿಲ್ಲ. ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದಿರುವ ಆಫ್ಘಾನಿಸ್ತಾನ, ಭಾರತ ತಂಡದ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಭಿಯಾನ ಆರಂಭಿಸಲಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಈ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಆಡದಿರಲು ನಿರ್ಧರಿಸಿರುವ ಕಾರಣ ಉದ್ಯಾನನಗರಿಯ ಕ್ರಿಕೆಟ್ ಪ್ರಿಯರಿಗೆ ನಿರಾಸೆಯಾಗಿದೆ.
ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವನ್ನು ಬದಿಗೊತ್ತಿ ಕೌಂಟಿ ಕ್ರಿಕೆಟ್‌ನತ್ತ ವಿರಾಟ್ ಕೊಹ್ಲಿ ಮುಖ ಮಾಡಲು ಕಾರಣ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿಸಿದ್ದ ಘನಘೋರ ವೈಫಲ್ಯ. ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ವಿರುದ್ಧ ಇನ್ನಿಲ್ಲದಂತೆ ಮುಗ್ಗರಿಸಿದ್ದ ಕೊಹ್ಲಿ, ಸರಣಿಯಲ್ಲಿ 13.40ರ ಸರಾಸರಿಯಲ್ಲಿ ಕೇವಲ 134 ರನ್ ಗಳಿಸಿದ್ದರು.

Related Articles