Sunday, December 22, 2024

ಟಿ20: ಮಿಥಾಲಿ, ವೇದಾ ಆರ್ಭಟಕ್ಕೆ ಬೆಚ್ಚಿದ ಹರಿಣಗಳು, ಭಾರತಕ್ಕೆ ಭರ್ಜರಿ ಜಯ

ಪೋಷೆಫ್‌ಸ್ಟ್ರೂಮ್: ಭಾರತ ಮಹಿಳಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
PC: Twitter/BCCI Women
ಮಾಜಿ ನಾಯಕಿ ಮಿಥಾಲಿ ರಾಜ್(ಅಜೇಯ 54) ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ(ಅಜೇಯ 37) ಅವರ ಬ್ಯಾಟಿಂಗ್ ಆರ್ಭಟಕ್ಕೆ ಹರಿಣ ಪಡೆ ಧೂಳೀಪಟಗೊಂಡಿತು. ಈ ಮೂಲಕ ಭಾರತೀಯ ವನಿತೆಯರು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಸರಣಿಯ 2ನೇ ಪಂದ್ಯ ಫೆ.16ರಂದು ನಡೆಯಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ವನಿತೆಯರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 164 ರನ್‌ಗಳ ಉತ್ತಮ ಮೊತ್ತ ಕಲೆಹಾಕಿದರು.
ಗುರಿ  ಬೆನ್ನಟ್ಟಿದ ಭಾರತ ತಂಡ, 18.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಅಧಿಕಾರಯುತ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದು ಅಜೇಯ ಆಟ ಪ್ರದರ್ಶಿಸಿದ ಮಿಥಾಲಿ ರಾಜ್ 48 ಎಸೆತಗಳಲ್ಲಿ ಆಕರ್ಷಕ 54 ರನ್ ಗಳಿಸಿದರೆ, ಕರ್ನಾಟಕದ ವೇದಾ ಕೃಷ್ಣಮೂರ್ತಿ ಸ್ಫೋಟಕ ಆಟವಾಡಿ ಕೇವಲ 22 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿದರು. ವೇದಾ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ, ಹಾಗೂ 3 ಸಿಕ್ಸರ್‌ಗಳು ಒಳಗೊಂಡಿದ್ದವು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 164 ರನ್
ವಾನ್ ಡೀಕರ್ಕ್ 38, ಡು ಪ್ರೀಜ್ 31; ಅನುಜಾ ಪಾಟೀಲ್ 2/23.
ಭಾರತ: 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 168 ರನ್
ಮಿಥಾಲಿ ರಾಜ್ ಅಜೇಯ 54, ವೇದಾ ಕೃಷ್ಣಮೂರ್ತಿ ಅಜೇಯ 37, ಜೆಮಿಮಾ ರಾಡ್ರಿಗಸ್ 37; ಎಂ.ಡೇನಿಯೆಲ್ಸ್ 1/16.

Related Articles