Friday, November 22, 2024

ನಾಳೆಯಿಂದ ತ್ರಿಕೋನ ಟಿ20 ಸರಣಿ: ಶುಭಾರಂಭದ ವಿಶ್ವಾಸದಲ್ಲಿ ಟೀಮ್ ಇಂಡಿಯಾ

ಕೊಲಂಬೊ: ಭಾರತ, ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನೊಳಗೊಂಡ ತ್ರಿಕೋನ ಟಿ20 ಸರಣಿ ನಾಳೆ ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ಆರಂಭವಾಗಲಿದ್ದು, ರೋಹಿತ್ ಶರ್ಮಾ ಸಾರಥ್ಯದ ಟೀಮ ಇಂಡಿಯಾ ಶುಭಾರಂಭದ ವಿಶ್ವಾಸದಲ್ಲಿದೆ,
ಈ ಸರಣಿಗೆ ಸ್ಟಾರ್ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಅವರಿಗೆ ಈ ಸರಣಿಗಾಗಿ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ವಿಜಯ್ ಶಂಕರ್ ಅವರಂತಹ ಯುವ ಆಟಗಾರರಿಗೆ ಇದು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿಕ್ಕಿರುವ ಉತ್ತಮ ವೇದಿಕೆಯಾಗಿದೆ.
ಆದರೆ ಕನ್ನಡಿಗ ಕೆ.ಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್, 3ನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ, 4ನೇ ಕ್ರಮಾಂಕದಲ್ಲಿ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಮತ್ತು 5ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಡುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಬೆಂಚ್ ಕಾಯಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
PC: Tiwtter/BCCI
ತಂಡಗಳ ವಿವರ
ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಸುರೇಶ್ ರೈನಾ, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್, ದೀಪಕ್ ಹೂಡ, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ರಿಷಭ್ ಪಂತ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜೈದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ದಿನೇಶ್ ಚಾಂದಿಮಾಲ್(ನಾಯಕ), ಉಪುಲ್ ತರಂಗ, ದನುಷ್ಕ ಗುಣತಿಲಕ, ಕುಶಾಲ್ ಮೆಂಡಿಸ್, ದಸುನ್ ಶನಕ, ಸುರಂಗ ಲಕ್ಮಲ್, ಕುಶಾಲ್ ಪೆರೇರಾ, ತಿಸಾರ ಪೆರೇರಾ, ಜೀವನ್ ಮೆಂಡಿಸ್, ಇಸುರು ಉದಾನ, ಅಕಿಲ  ಧನಂಜಯ, ದುಷ್ಮಂತ ಚಾಮೀರ, ಧನಂಜಯ ಡಿ’ಸಿಲ್ವಾ, ಅಮಿಲಾ ಅಪೋನ್ಸೊ, ನುವಾನ್ ಪ್ರದೀಪ್.
ಸಮಯ: ಸಂಜೆ 7ಕ್ಕೆ ಆರಂಭ
ಸ್ಥಳ: ಆರ್.ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ
ನೇರ ಪ್ರಸಾರ: ಡಿ ಸ್ಪೋರ್ಟ್ಸ್

Related Articles