ಪುಣೆ, ಮಾರ್ಚ್ 6: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಸುದೀರ್ಘ ಮತ್ತು ಕಠಿಣ ಹೋರಾಟದ ನಂತರ ಇದೀಗ ಎಫ್‌ಸಿ ಪುಣೆ ಸಿಟಿ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಸೆಮಿಫೈನಲ್‌ನ ಮೊದಲ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಬುಧವಾರ ಇಲ್ಲಿನ ಬಾಳೇವಾಡಿಯಲ್ಲಿರುವ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳು ಫೈನಲ್ ಸ್ಥಾನಕ್ಕೆ ಹತ್ತಿರವಾಗುವ ತವಕದಲ್ಲಿವೆ.
ಬೆಂಗಳೂರು ಎಫ್‌ಸಿ ತಂಡ ಐಪಿಎಸ್‌ನ ತನ್ನ ಪದಾರ್ಪಣೆಯ ವರ್ಷದಲ್ಲೇ ಸ್ಥಿರ ಪ್ರದರ್ಶನ ತೋರಿ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದೆ. ಎಫ್‌ಸಿ ಪುಣೆ ಸಿಟಿ ತಂಡ ಐಎಸ್‌ಎಲ್‌ನಲ್ಲಿ ಇದೇ ಮೊದಲ ಬಾರಿ ಪ್ಲೇ ಆಫ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಉಭಯ ತಂಡಗಳು ಇಲ್ಲಿಯವರೆಗೆ ಕಣ್ಮನ ಸೆಳೆಯುವ ಬ್ರ್ಯಾಂಡ್ ಫುಟ್ಬಾಲ್ ಆಡಿದ್ದು, ಪ್ರಸಕ್ತ ಸಾಲಿನಲ್ಲಿ ಈ ತಂಡಗಳ 3ನೇ ಮುಖಾಮುಖಿಯಲ್ಲೂ ಅದೇ ಆಟವನ್ನು ನಿರೀಕ್ಷಿಸಲಾಗಿದೆ.
‘ನಾವು ಹೇಗೆ ಆಡುತ್ತೇವೆ ಎಂಬುದನ್ನು ಬದಲಾಯಿಸುವ ಸಮಯ ಇದಲ್ಲ. ಈಗ ನಾವು ಏನಾದರೂ ಬದಲಾವಣೆಗಳನ್ನು ಮಾಡಿದರೆ ಅದು ಕೆಲಸ ಮಾಡುವುದಿಲ್ಲ. ಲೀಗ್ ಹಂತದಲ್ಲಿ ಆಡುವ ಸಂದರ್ಭದಲ್ಲಿ ಸರಿದೂಗಿಸಲು ಪಂದ್ಯಗಳಿರುತ್ತವೆ. ಆದರೆ ಈಗ ನಾವು ತುಂಬಾ ಎಚ್ಚರಿಕೆಯಿಂದಿರಬೇಕಿದೆ. ನಮಗೆ ಎರಡು ಪಂದ್ಯಗಳಿದ್ದು, ನಾಳೆ ಏನೂ ಕೂಡ ನಿರ್ಧಾರವಾಗುವುದಿಲ್ಲ. ಫೈನಲ್ ಪ್ರವೇಶಿಸಬೇಕಾದರೆ ನಾವು ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕಿದೆ,’’ ಎಂದು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಎಫ್‌ಸಿ ಪುಣೆ ಸಿಟಿ ತಂಡದ ಪ್ರಧಾನ ಕೋಚ್ ರ್ಯಾಂಕೊ ಪೊಪೊವಿಕ್ ನುಡಿದಿದ್ದಾರೆ.
ತಂಡದ ರಣತಂತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೊಪೊವಿಕ್, ‘ಇದು ತುಂಬಾ ಸರಳ. ಸಾಧ್ಯವಾದಷ್ಟು ಹೆಚ್ಚಿನ ಗೋಲುಗಳನ್ನು ಗಳಿಸುವುದು ಮತ್ತು ಸಾಧ್ಯವಾದಷ್ಟು ಕಡಿಮೆ ಗೋಲುಗಳನ್ನು ಬಿಟ್ಟು ಕೊಡುವುದು. ಅದನ್ನು ಸಾಧಿಸಿದರೆ, ನಾವು ಫೈನಲ್‌ನಲ್ಲಿರಲಿದ್ದೇವೆ. ಇಡೀ ಟೂರ್ನಿಯಲ್ಲಿ ಆಡಿದಂತೆ ನಾವು ಆಡಬೇಕಿದೆ. ಈ ಸಾಲಿನಲ್ಲಿ ನಾವು ಅತ್ಯುತ್ತಮವಾಗಿ ಆಡಿದ್ದೇವೆ,’’ ಎಂದಿದ್ದಾರೆ.
ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಪುಣೆ ಸಿಟಿ ತಂಡದ ಡೈನಾಮಿಕ್ ಆಟಗಾರರಾದ ಮಾರ್ಸೆಲೊ ಲೀಟ್ ಮತ್ತು ಎಮಿಲಿಯಾನೊ ಅಲ್ಫಾರೊ, ನಾಳಿನ ದೊಡ್ಡ ಪಂದ್ಯಕ್ಕೆ ಲಭ್ಯರಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಪೊವಿಕ್, ‘ಅವರನ್ನು ಹೊಂದದಿರುವುದು ಬಾರ್ಸಿಲೋನಾ ತಂಡ ಮೆಸ್ಸಿ ಮತ್ತು ಸ್ವಾರೆಜ್ ಇಲ್ಲದೆ ಕಣಕ್ಕಿಳಿದಂತೆ,’’ ಎಂದಿದ್ದಾರೆ.
ಪುಣೆಯಲ್ಲಿ ನಡೆಯಲಿರುವ ಈ ಪಂದ್ಯ ಬೆಂಗಳೂರು ಎಫ್‌ಸಿ ಮತ್ತು ಎಫ್‌ಸಿ ಪುಣೆ ಸಿಟಿ ನಡುವಣ 3ನೇ ಮುಖಾಮುಖಿಯಾಗಿದೆ. ಕಳೆದ ಬಾರಿ ಇಲ್ಲಿಗೆ ಆಗಮಿಸಿದ್ದಾಗ ಬೆಂಗಳೂರು ತಂಡ 3-1ರಿಂದ ಆತಿಥೇಯರನ್ನು ಸೋಲಿಸಿತ್ತು.
ತಮ್ಮ ಎದುರಾಳಿಗಳ ಬಗ್ಗೆ ಮಾತನಾಡಿರುವ ಬಿಎಫ್‌ಸಿ ತಂಡದ ಸಹಾಯಕ ಕೋಚ್ ನೌಶಾದ್ ಮೂಸಾ, ಲೀಗ್ ಹಂತದಲ್ಲಿ ತಮ್ಮ ತಂಡ ಅಗ್ರಸ್ಥಾನ ಪಡೆದಿದ್ದರೂ, ಯಾವುದೇ ಪಂದ್ಯ ಸುಲಭವಲ್ಲ ಎಂದಿದ್ದಾರೆ. ‘ಅವರ ವಿರುದ್ಧ ನಾವು ಆಡಿದ ಮೊದಲ ಪಂದ್ಯದಲ್ಲಿ ಮುನ್ನಡೆಯಲ್ಲಿದ್ದೆವು, ಅವರು ರೆಡ್ ಕಾರ್ಡ್ ಪಡೆದ ನಂತರವೇ ನಾವು 3 ಗೋಲು ಬಾರಿಸಿದೆವು. ಎಫ್‌ಸಿ ಪುಣೆ ಸಿಟಿ ಕಠಿಣ ಎದುರಾಳಿ ಮತ್ತು ಸವಾಲನ್ನು ನಾವು ಎದುರು ನೋಡುತ್ತಿದ್ದೇವೆ,’’ ಎಂದು ತಿಳಿಸಿದ್ದಾರೆ.
ಟೂರ್ನಿಯುದ್ದಕ್ಕೂ ಎಫ್‌ಸಿ ಪುಣೆ ಸಿಟಿ ತಂಡ ಆಕ್ರಮಣಕಾರಿ ಫುಟ್ಬಾಲ್ ಆಡಿದ್ದು, ಅವರ ರಕ್ಷಣಾ ಪಡೆಯ ಮೇಲೆ ಕೆಲ ಪ್ರಶ್ನೆಗಳು ಎದ್ದಿವೆ. ಆ ನ್ಯೂನತೆಯನ್ನು ಬಳಸಿಕೊಳ್ಳುವ ವಿಶ್ವಾಸದಲ್ಲಿದೆ ಬಿಎಫ್‌ಸಿ ತಂಡ. ಪ್ಲೇ ಆಫ್‌ನ ಮೊದಲ ಪಂದ್ಯವನ್ನು ತವರಿನ ಹೊರಗೆ ಆಡುತ್ತಿರುವುದು ಅನನುಕೂಲತೆಯಲ್ಲ ಎಂದಿರುವ ಮೂಸಾ, ತವರಿನಾಚೆ ಬಿಎಫ್‌ಸಿ ಅತ್ಯುತ್ತಮ ದಾಖಲೆ ಹೊಂದಿದೆ ಎಂದಿದ್ದಾರೆ.
‘ಪ್ಲೇ ಆಫ್‌ನ ಮೊದಲ ಪಂದ್ಯವನ್ನು ತವರಿನಾಚೆ ಆಡುತ್ತಿರುವುದು ನಮ್ಮ ಪಾಲಿಗೆ ಅನನುಕೂಲತೆ ಎಂದು ನಾವು ಖಂಡಿತಾ ಭಾವಿಸುವುದಿಲ್ಲ. ನೀವು ನಮ್ಮ ಟ್ರ್ಯಾಕ್ ರೆಕಾರ್ಡ್ ನೋಡಿದರೆ, ತವರಿನ ಹೊರಗೆ ನಾವು ಅಮೋಘ ದಾಖಲೆ ಹೊಂದಿದ್ದೇವೆ. ನಾವು ಸಕಾರಾತ್ಮಕ ಫುಟ್ಬಾಲ್ ಆಡಿ ಪಂದ್ಯ ಗೆಲ್ಲಲು ಬಯಸಿದ್ದೇವೆ,’’ ಎಂದು ಮೂಸಾ ಹೇಳಿದ್ದಾರೆ.