ಬೆಂಗಳೂರು
ಫಿನ್ಲೆಂಡ್ನ ಜವಾಸ್ಕಿಲಾದಲ್ಲಿ ನಡೆದ ಎಫ್ಐಎ ವಿಶ್ವ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ರ್ಯಾಲಿಯನ್ನು ಪೂರ್ಣಗೊಳಿಸಿದ ಭಾರತದ ನೋಂದಾಯಿತ ಮೊದಲ ರ್ಯಾಲಿಪಟು ಎಂಬ ಹೆಗ್ಗಳಿಕೆಗೆ ಪುಣೆಯ ಸಂಜಯ್ ತಕಾಲೆ ‘ಭಾಜರನರಾಗಿದ್ದಾರೆ. ನೆಸ್ಟೆ ರ್ಯಾಲಿಯಲ್ಲಿ ಸಂಜಯ್ ಡಬ್ಲ್ಯುಆರ್ಸಿ ೩ ವಿಭಾಗದಲ್ಲಿ ಸಮಗ್ರ ೧೪ನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದರು.
ಪುಣೆ ಮೂಲದ ತಕಾಲೆ ಹಾಗೂ ಅವರ ಸಹ ಚಾಲಕ ಇಂಗ್ಲೆಂಡ್ನ ಡಾರೆನ್ ಗೆರೋಡ್ ೩೧೭.೨೬ ಕಿ.ಮೀ. ಅಂತರದ ವಿಶೇಷ ಹಂತಗಳನ್ನು ಫೋರ್ಡ್ ಫಿಯೆಸ್ಟಾ ಮೂಲಕ ದಾಟಿ ೧೪ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.
”ಪ್ರತಿಯೊಬ್ಬ ರ್ಯಾಲಿ ಪಟುಗಳಂತೆ ವಿಶ್ವ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡು ಅಲ್ಲಿ ಯಶಸ್ಸು ಕಾಣುವ ಗುರಿ ಹೊಂದಿದ್ದೆ. ಜಗತ್ತಿನಲ್ಲಿ ಅತ್ಯಂತ ವೇಗದ ರ್ಯಾಲಿ ಎನಿಸಿರುವ ಎಫ್ಐಎ ವಿಶ್ವ ರ್ಯಾಲಿಯಲ್ಲಿ ಪಾಲ್ಗೊಂಡು ಅದನ್ನು ಪೂರ್ಣಗೊಳಿಸುವ ಮೂಲಕ ಕನಸು ನನಸಾಗಿದೆ. ಇದೊಂದು ಅದ್ಭುತ ಅನುಭವ. ಈ ರ್ಯಾಲಿಯಿಂದ ಸಾಕಷ್ಟು ಕಲಿತುಕೊಂಡಿರುವೆ. ಎರಡು ಬಾರಿ ಪಂಕ್ಚರ್ ಆಗದೇ ಇರುತ್ತಿದ್ದರೆ ಇನ್ನೂ ಉತ್ತಮ ಸ್ಥಾನವನ್ನು ಗಳಿಸಬಹುದಾಗಿತ್ತು. ಆದರೆ ಅದು ರ್ಯಾಲಿಯ ಒಂದು ಅವಿಭಾಜ್ಯ ಅಂಗ, ಆ ಬಗ್ಗೆ ಯಾವುದೇ ರೀತಿಯ ಬೇಸರ ಅಥವಾ ದೂರು ಮಾಡುತ್ತಿಲ್ಲ,”ಎಂದು ತಕಾಲೆ ಹೇಳಿದರು.