ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ ಪ್ರಕರಣದಲ್ಲಿ ತಮ್ಮ ಪಾತ್ರ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರ ಮೇಲೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಂದು ಪಂದ್ಯದ ನಿಷೇಧ ಹೇರಿದೆ. ಅಲ್ಲದೆ ಪಂದ್ಯ ಸಂಭಾವನೆಯ ಶೇಕಡ 100ರಷ್ಟು ದಂಡ ವಿಸಿದೆ. ಜೊತೆಗೆ 3 ಡೀಮೆರಿಟ್ಸ್ ಪಾಯಿಂಟ್ಸ್ ಕೂಡ ಸ್ಮಿತ್ ಪಾಲಾಗಿದೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಟೆಸ್ಟ್‌ನ ತೃತೀಯ ದಿನದಾಟದ ವೇಳೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರ್‌ಟಾ ಬಾಲ್ ಟ್ಯಾಂಪರಿಂಗ್ ನಡೆಸಲು ಯತ್ನಿಸಿದ್ದು ಕ್ಯಾಮರಾಗಳ ಕಣ್ಣಿನಲ್ಲಿ ಸೆರೆಯಾಗಿತ್ತು. ಬಾಲ್ ಟ್ಯಾಂಪರಿಂಗ್ ನಡೆಸಲು ಬಳಸುವ ಸಾಧನವನ್ನು ಬ್ಯಾಂಕ್ರಾಫ್ಟ್ ತಮ್ಮ ಪ್ಯಾಂಟ್ ಜೇಬಿನಿಂದ ತೆಗೆದು ಸೊಂಟ ಭಾಗದಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುವುದರೊಂದಿಗೆ ಆಸೀಸ್ ಕ್ರಿಕೆಟಿಗರ ಕಳ್ಳಾಟ ಬಯಲಾಗಿತ್ತು.
ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರಿಗೆ ಪಂದ್ಯ ಸಂಭಾವನೆಯ ಶೇಕಡ 75ರಷ್ಟು ದಂಡ ವಿಧಿಸಲಾಗಿದೆ.
ದಿನದಾಟದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ತಂಡ ವ್ಯವಸ್ಥಿತವಾಗಿ ಬಾಲ್ ಟ್ಯಾಂಪರಿಂಗ್ ನಡೆಸಲು ಯತ್ನಿಸಿದ್ದ ವಿಷಯವನ್ನು ನಾಯಕ ಸ್ಟೀವನ್ ಸ್ಮಿತ್ ಒಪ್ಪಿಕೊಂಡಿದ್ದರು. ಬಾಲ್ ಟ್ಯಾಂಪರಿಂಗ್ ನಡೆಸಲು ಬ್ಯಾಂಕ್ರ್‌ಟಾ ಪ್ರಯತ್ನ ಮಾಡಿದ್ದರ ಹಿಂದೆ ಇಡೀ ತಂಡದ ಪಾತ್ರವಿತ್ತು ಎಂದು ಸ್ಮಿತ್ ಸತ್ಯ ಒಪ್ಪಿಕೊಂಡಿದ್ದರು.