Friday, November 22, 2024

ಮಲ್ಲೇಶ್ವರಂನಲ್ಲಿ ಬೀಗಲ್ಸ್‌ಗೆ ಅಂತಾರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ಬಾಲ್ ಇನ್‌ಡೋರ್ ಸ್ಟೇಡಿಯಂ

ಬೆಂಗಳೂರು: ಕರ್ನಾಟಕ ಹೆಸರಾಂತ ಬಾಸ್ಕೆಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಮಲ್ಲೇಶ್ವರಂನ ಬೀಗಲ್ಸ್, ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ಹೊಂದಿದ್ದು, ಹೊಸ ಇನ್‌ಡೋರ್ ಕ್ರೀಡಾಂಗಣಕ್ಕೆ ಬೆಂಗಳೂರು ಮೇಯರ್ ಸಂಪತ್‌ರಾಜ್ ಚಾಲನೆ ನೀಡಿದರು.


ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ವಿಶೇಷ ಮುತುವರ್ಜಿಯಿಂದ ಈ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದೆ. ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಕೆ. ಗೋವಿಂದರಾಜ್, ಈ ಕ್ರೀಡಾಂಗಣದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬೀಗಲ್ಸ್‌ನ ಈ ಕ್ರೀಡಾಂಗಣದಲ್ಲಿ ಈ ಹಿಂದೆ ಬೆಳಗ್ಗೆ ಹಾಗೂ ಸಂಜೆ ತಲಾ 2 ಗಂಟೆ ಮಾತ್ರ ಆಡಲು ಅವಕಾಶ ಇರುತ್ತಿತ್ತು. ಆದರೆ ಈಗ ವರ್ಷದ 365 ದಿನವೂ ಆಡುವ ಅವಕಾಶ ಕಲ್ಪಿಸಲಾಗಿದೆ. 1965ರಲ್ಲಿ ಬಾಸ್ಕೆಟ್‌ಬಾಲ್ ಅಭಿಮಾನಿ ಬಿ.ವಿ.ಪಾಟಂಕರ್ ಅವರು ತಮ್ಮದೇ ಸ್ವಂತ ಪಾಟಂಕರ್ ಲೇಔಟ್‌ನಲ್ಲಿ ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಿದ್ದರು. ನಂತರ ಮಲ್ಲೇಶ್ವರಂನ 15ನೇ ಕ್ರಾಸ್‌ಗೆ ಕ್ಲಬ್ ಸ್ಥಳಾಂತರಗೊಂಡಿತು. ಬೀಗಲ್ಸ್ ಕ್ಲಬ್ ಆಗಿ ರೂಪುಗೊಂಡ ನಂತರ ಹಲವಾರು ಆಟಗಾರರು ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳಲ್ಲಿ ಮಿಂಚಿ ಕೀರ್ತಿ ತಂದರು. ಈ ಕ್ಲಬ್‌ಗೆ ಹೊಸ ರೂಪು ನೀಡಬೇಕೆಂಬ ಉದ್ದೇಶದಿಂದ ಮಾಜಿ ಆಟಗಾರರು ಹಾಗೂ ಬಾಸ್ಕೆಟ್‌ಬಾಲ್ ಅಭಿಮಾನಿಗಳು ಕ್ರೀಡಾಂಗಣದ ಯೋಜನೆ ರೂಪಿಸಿದರು. ಬೆಂಗಳೂರು ಮಹಾನಗರ ಪಾಲಿಗೆ ಕೂಡ ಇದಕ್ಕೆ ಪ್ರೋತ್ಸಾಹ ನೀಡಿತು. ಪರಿಣಾಮ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ತಲೆ ಎತ್ತಿದೆ.

ಬೀಗಲ್ಸ್‌ನಲ್ಲಿರುವ ಸೌಲಭ್ಯಗಳು
* ದಿನದಲ್ಲಿ ಕನಿಷ್ಠ 18 ಗಂಟೆಗಳ ಕಾಲ ಆಡಲು ಅವಕಾಶ.
* ಅಂತರಾಷ್ಟ್ರೀಯ ಗುಣಮಟ್ಟದ ಜಿಮ್ ಸೌಲಭ್ಯ.
* ಮಲ್ಲೇಶ್ವರಂ ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳ ತರಬೇತಿಗೆ ವಿಶೇಷ ಸೌಲಭ್ಯ.
* ಅಂತರಾಷ್ಟ್ರೀಯ ಆಟಗಾರರಿಂದ ತರಬೇತಿ.
* ಸೂರ್ಯನ ಬಿಸಿಲನ್ನು ಬಳಸಿಕೊಳ್ಳುವ ತಂತ್ರಜ್ಞಾನ ಅಳವಡಿಕೆ, ವಿದ್ಯುತ್ ದೀಪವನ್ನು ಕಡಿಮೆ ಅವಲಂಬಿಸುವುದು.
* ಇ-ಲರ್ನಿಂಗ್‌ಗೆ ಹೆಚ್ಚಿನ ಒತ್ತು, ಡಿಜಿಟಲ್ ಲೈಬ್ರೆರಿ ಸ್ಥಾಪನೆ.

Related Articles