ಕೊಲಂಬೊ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್ ಸಭ್ಯರ ಆಟವೆಂದೇ ಖ್ಯಾತಿ ಪಡೆದಿದೆ. ಆದರೆ ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಆಟಗಾರರು ತೋರಿದ ವರ್ತನೆ ಕ್ರಿಕೆಟ್ ಸಭ್ಯರ ಆಟ ಎಂಬುದನ್ನು ಅಣಕವಾಡುತ್ತಿತ್ತು.
ತ್ರಿಕೋನ ಟಿ20 ಸರಣಿಯ ಈ ಅಂತಿಮ ಲೀಗ್ ಪಂದ್ಯ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳಿಗೆ ನಿರ್ಣಾಯವಾಗಿತ್ತು. ಗೆದ್ದ ತಂಡಕ್ಕೆ ಭಾನುವಾರ ನಡೆಯುವ ಭಾರತ ವಿರುದ್ಧದ ಫೈನಲ್ ಪಂದ್ಯದ ಟಿಕೆಟ್. ಹೀಗಾಗಿ ಪಂದ್ಯ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು.
ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 12 ರನ್‌ಗಳು ಬೇಕಿದ್ದವು. ಆದರೆ ಅಂತಿಮ ಓವರ್‌ನಲ್ಲಿ ಅಂಪೈರ್ ನೋಬಾಲ್ ನೀಡಲಿಲ್ಲ ಎಂದು ಆರೋಪಿಸಿ ಮೈದಾನ ತೊರೆಯುವುದರೊಂದಿಗೆ ಬಾಂಗ್ಲಾ ತಂಡದ ಆಟಗಾರರ ದುರ್ವರ್ತನೆ ಆರಂಭಗೊಂಡಿತು. ಈ ಸಂದರ್ಭಲ್ಲಿ ಮೈದಾನ ಪ್ರವೇಶಿಸಿದ ಬಾಂಗ್ಲಾ ತಂಡದ ಮೀಸಲು ಆಟಗಾರ ನುರುಲ್ ಹೊಸೇನ್, ಶ್ರೀಲಂಕಾ ತಂಡದ ನಾಯಕ ತಿಸಾರ ಪೆರೇರಾ ಅವರೊಂದಿಗೆ ಚಕಮಕಿ ನಡೆಸಿದ. ಬಾಂಗ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್‌ನ ಗಾಜಿನ ಬಾಗಿಲನ್ನು ಒಡೆದರು. ಅಲ್ಲದೆ ಬಾಂಗ್ಲಾ ಆಟಗಾರನೊಬ್ಬ ಶ್ರೀಲಂಕಾದ ಕುಸಾಲ್ ಮೆಂಡಿಸ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ. ಸಿಟ್ಟಿಗೆದ್ದ ಮೆಂಡಿಸ್ ತಿರುಗೇಟು ನೀಡುವ ಯತ್ನದಲ್ಲಿದ್ದಾಗ, ಬಾಂಗ್ಲಾದ ಹಿರಿಯ ಆಟಗಾರ ತಮೀಮ್ ಇಕ್ಬಾಲ್, ಕೆರಳಿದ್ದ ಮೆಂಡಿಸ್ ಅವರನ್ನು ಸಮಾಧಾನ ಪಡಿಸಿ ಪೆವಿಲಿಯನ್‌ನತ್ತ ಕರೆದೊಯ್ದರು.