Friday, December 27, 2024

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಗೆಲುವಿನ ಓಟ, ಅಸ್ಸಾಂ ವಿರುದ್ಧ ಭರ್ಜರಿ ಜಯ

ಬೆಂಗಳೂರು: ಮಾಜಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.
ಗುರುವಾರ ನಗರದ ಹೊರವಲಯದಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ’ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ, ಅಸ್ಸಾಂ ತಂಡವನ್ನು 111 ರನ್‌ಗಳಿಂದ ಭರ್ಜರಿಯಾಗಿ ಬಗ್ಗು ಬಡಿಯಿತು.
PC: Facebook/Prasidh Krishna
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303 ರನ್‌ಗಳ ಉತ್ತಮ ಮೊತ್ತ ದಾಖಲಿಸಿತು. ಸ್ಟಾರ್ ಓಪನರ್ ಕೆ.ಎಲ್ ರಾಹುಲ್ ಅವರ ವೈಫಲ್ಯದ ನಡುವೆ, ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ 84 ರನ್ ಸಿಡಿಸಿ ಮಿಂಚಿದರು. ಬರೋಡ ವಿರುದ್ಧದ ಮೊದಲ ಪಂದ್ಯದಲ್ಲಿ ಮಯಾಂಕ್ ಶತಕ ಬಾರಿಸಿದ್ದರು. ಬರೋಡ ವಿರುದ್ಧ ಬಿರುಸಿನ 77 ರನ್ ಸಿಡಿಸಿದ್ದ ಆರ್.ಸಮರ್ಥ್ ಅಜೇಯ 70 ರನ್ ಗಳಿಸಿದರೆ, ಕರುಣ್ ನಾಯರ್ 58 ರನ್‌ಗಳ ಕಾಣಿಕೆಯಿತ್ತರು.
ಕರ್ನಾಟಕ ಒಡ್ಡಿದ 304 ರನ್‌ಗಳ ಕಠಿಣ ಸವಾಲನ್ನು ಬೆನ್ನತ್ತಿದ ಅಸ್ಸಾಂ, ರಾಜ್ಯದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಅವರ ಮಾರಕ ದಾಳಿಗೆ ತತ್ತರಿಸಿ 47.2 ಓವರ್‌ಗಳಲ್ಲಿ ಕೇವಲ 192 ರನ್‌ಗಳಿಗೆ ಸರ್ವಪತನ ಕಂಡಿತು. ಅಮೋಘ ದಾಳಿ ಸಂಘಟಿಸಿದ ಪ್ರಸಿದ್ಧ್  ಕೃಷ್ಣ 33 ರನ್ನಿತ್ತು 6 ವಿಕೆಟ್ ಪಡೆದರು. ಮತ್ತೊಬ್ಬ ಯುವ ವೇಗಿ ಟಿ.ಪ್ರದೀಪ್ 43 ರನ್ನಿಗೆ 2 ವಿಕೆಟ್ ಕಬಳಿಸಿದರೆ, ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 35 ರನ್‌ಗಳಿಗೆ 2 ವಿಕೆಟ್ ಉರುಳಿಸಿ ರಾಜ್ಯದ ಗೆಲುವಿನಲ್ಲಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303 ರನ್
ಮಯಾಂಕ್ ಅಗರ್ವಾಲ್ 84, ಕರುಣ್ ನಾಯರ್ 58, ಆರ್.ಸಮರ್ಥ್ ಅಜೇಯ 70; ಅಬು ನೆಚಿಮ್ ಅಹ್ಮದ್ 2/51.
ಅಸ್ಸಾಂ: 47.2 ಓವರ್‌ಗಳಲ್ಲಿ 192 ರನ್‌ಗಳಿಗೆ ಆಲೌಟ್
ಶಿವಶಂಕರ್ ರಾಯ್ 64, ಅಬು ನೆಚಿಮ್ ಅಹ್ಮದ್ ಅಜೇಯ 43; ಎಂ.ಪ್ರಸಿದ್ಧ್ ಕೃಷ್ಣ 6/33, ಟಿ.ಪ್ರದೀಪ್ 2/43, ಶ್ರೇಯಸ್ ಗೋಪಾಲ್ 2/35.

Related Articles