ಬೆಂಗಳೂರು: ರಾಕಿಂಗ್ ಸ್ಟಾರ್ ಕೆ.ಎಲ್ ರಾಹುಲ್ ಪಂಜಾಬ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಹುಲ್ ಕೇವಲ 90 ಎಸೆತಗಳಲ್ಲಿ 107 ರನ್ ಸಿಡಿಸಿ ಮಿಂಚಿದರು. ರಾಹುಲ್ ಅವರ ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿಗಳು ಹಾಗೂ 5 ಸಿಕ್ಸರ್ಗಳು ಒಳಗೊಂಡಿದ್ದವು.
ಆದರೆ ಪಂಜಾಬ್ ವಿರುದ್ಧ ಕರ್ನಾಟಕ 4 ರನ್ಗಳ ಸೋಲು ಕಾಣುವುದರೊಂದಿಗೆ ರಾಹುಲ್ ಅವರ ಶತಕ ವ್ಯರ್ಥವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ನಿಗದಿತ 42 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 269 ರನ್ಗಳ ಉತ್ತಮ ಮೊತ್ತ ಕಲೆ ಹಾಕಿತು. ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದ ಯುವ ಬಲಗೈ ಬ್ಯಾಟ್ಸ್ಮನ್ ಶುಭಮನ್ ಗಿಲ್, 122 ಎಸೆತಗಳಲ್ಲಿ 123 ರನ್ ಬಾರಿಸಿದರು.
270 ರನ್ಗಳ ಕಠಿಣ ಗುರಿಗೆ ದಿಟ್ಟ ಉತ್ತರ ನೀಡಿದ ಕರ್ನಾಟಕ, ಅಂತಿಮವಾಗಿ 42 ಓವರ್ಗಳಲ್ಲಿ 8 ವಿಕೆಟ್ಗೆ 265 ರನ್ ಗಳಿಸಿ ಕೇವಲ 4 ರನ್ಗಳಿಂದ ಗೆಲುವಿನಿಂದ ವಂಚಿತವಾಯಿತು.
ಸಂಕ್ಷಿಪ್ತ ಸ್ಕೋರ್
ಪಂಜಾಬ್: 42 ಓವರ್ಗಳಲ್ಲಿ 3 ವಿಕೆಟ್ಗೆ 269 ರನ್
ಶುಭಮನ್ ಗಿಲ್ ಅಜೇಯ 123, ಮನ್ದೀಪ್ ಸಿಂಗ್ 64, ಯುವರಾಜ್ ಸಿಂಗ್ 36, ಗುರ್ಕೀರತ್ ಮಾನ್ ಅಜೇಯ 35; ಆರ್.ವಿನಯ್ ಕುಮಾರ್ 2/40, ಟಿ.ಪ್ರದೀಪ್ 1/46.
ಕರ್ನಾಟಕ: 42 ಓವರ್ಗಳಲ್ಲಿ 8 ವಿಕೆಟ್ಗೆ 265 ರನ್
ಮಯಾಂಕ್ ಅಗರ್ವಾಲ್ 28, ಕೆ.ಎಲ್ ರಾಹುಲ್ 107, ಪವನ್ ದೇಶಪಾಂಡೆ 53, ಆರ್.ವಿನಯ್ ಕುಮಾರ್ ಅಜೇಯ 26; ಸಿದ್ಧಾರ್ಥ್ ಕೌಲ್ 3/47, ಬರಿಂದರ್ ಸ್ರನ್ 2/72, ಅಭಿಷೇಕ್ ಶರ್ಮಾ1/25.